ಬೆಳಗಾವಿ : ಒಂದೆಡೆ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ರಾಜ್ಯ ಸರ್ಕಾರ ಚಾಲನೆ ಕೊಟ್ಟಿದೆ. ಆದರೆ ಇಲ್ಲಿನ ಕಾಡಂಚಿನ ಗ್ರಾಮಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ ವ್ಯವಸ್ಥೆ ಇಲ್ಲದೇ ವನ್ಯಮೃಗಗಳ ಭೀತಿಯಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ.
ಜಿಲ್ಲೆಯ ಖಾನಾಪುರ ತಾಲೂಕಿನ ಹಲವು ಗ್ರಾಮಗಳಲ್ಲಿನ ಜನರು ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಇಲ್ಲಿನ ಬಾಲಕೆ ಕೆಎಚ್, ಶಿಂಧೊಳ್ಳಿ, ಹೊನಕಲ್, ಗವ್ವಾಳಿ, ಪಾಸ್ತೊಳಿ, ಅಮಗಾಂವ, ತಳೇವಾಡಿ, ಕೃಷ್ಣಾಪುರ, ದೇಗಾಂವ್, ಹುಳಂದ, ಮಾನ, ಸಡಾ, ಹರೂರಿ, ಡೋಕೆಗಾಳಿ, ಶೇಡೆಗಾಳಿ, ಮಂತುರ್ಗಾ, ಅಸೋಗಾ, ಕಾಂಜಳೆ, ನಾಗುರ್ಡಾ, ಒತ್ತೋಳಿ, ರಾಮಗುರವಾಡಿ, ಕುಪ್ಪಟಗಿರಿ, ಇದ್ದಲಹೊಂಡ ಸೇರಿ ಕಾಡಂಚಿನ ಬಹಳಷ್ಟು ಗ್ರಾಮಗಳಲ್ಲಿ ಬಸ್ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಸ್ ಸೌಲಭ್ಯ ಇಲ್ಲದಿರುವುದು ಇಲ್ಲಿನ ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಅಲ್ಲದೆ ಇಲ್ಲಿನ ಶಾಲಾ ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುವಂತಾಗಿದೆ. ಪ್ರತಿದಿನ ಕಿ.ಮೀ.ಗಟ್ಟಲೇ ನಡೆದುಕೊಂಡೇ ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕಾಗಿದೆ. ಈ ಬಗ್ಗೆ ಖಾನಾಪುರ ತಾಲೂಕಿನ ಗುಂಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಲಕೆ ಕೆಚ್ ಗ್ರಾಮದ ವಿದ್ಯಾರ್ಥಿಗಳು ಈಟಿವಿ ಭಾರತ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬಸ್ಗಾಗಿ ವಿದ್ಯಾರ್ಥಿನಿಯರ ಆಗ್ರಹ : 'ನಮ್ಮೂರಿನಲ್ಲಿ ಕೇವಲ ಐದನೇ ತರಗತಿವರೆಗೆ ಮಾತ್ರ ಶಾಲೆ ಇದೆ. ನಂತರ ನಾವು ನಮ್ಮೂರಿನಿಂದ 5 ಕಿ.ಮೀ. ದೂರವಿರುವ ಗುಂಜಿ ಗ್ರಾಮಕ್ಕೆ ಹೋಗಬೇಕು. ಪ್ರತಿನಿತ್ಯ 5 ಕಿ.ಮೀ ದೂರ ನಡೆದುಕೊಂಡೇ ಹೋಗುತ್ತೇವೆ. ಮಾರ್ಗಮಧ್ಯೆ ಕಾಡು ಹಂದಿ, ಹಾವು, ನರಿ ಸೇರಿ ಇನ್ನಿತರ ಕಾಡು ಪ್ರಾಣಿಗಳು ಓಡಾಡುತ್ತಿರುತ್ತವೆ. ಇದರಿಂದಾಗಿ ಜೀವ ಭಯದಲ್ಲೇ ಇಲ್ಲಿ ನಾವು ಓಡಾಡಬೇಕು. ನಮ್ಮ ಊರಿಗೆ ಬಸ್ ಬಿಡುವಂತೆ ಕೇಳಿಕೊಂಡರೂ ಯಾರೂ ನಮ್ಮ ಮನವಿಗೆ ಸ್ಪಂದಿಸಿಲ್ಲ. ಸರ್ಕಾರ ನಮಗೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಬಹಳ ಅನುಕೂಲ ಆಗುತ್ತದೆ ಎಂದು 10ನೇ ತರಗತಿ ವಿದ್ಯಾರ್ಥಿನಿಯರಾದ ಶೃತಿ ಮಶನೋ ಅಳವನಿ, ಅಂಕಿತಾ ಮೋಹನ ದೇಸಾಯಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಶಿಂಧೊಳ್ಳಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರದೀಪ ಘಾಡೆ ಮಾತನಾಡಿ, ಖಾನಾಪುರ, ಬೆಳಗಾವಿಗೆ ಶಾಲೆ ಮತ್ತು ಕಾಲೇಜುಗಳಿಗೆ ನಮ್ಮೂರಿನ ಹುಡುಗರು ಹೋಗುತ್ತಾರೆ. ಪ್ರತಿದಿನ 7-8 ಕಿ.ಮೀ. ಮುಖ್ಯ ರಸ್ತೆವರೆಗೂ ನಡೆದುಕೊಂಡು ಹೋಗಿ ಬಸ್ ಹತ್ತಬೇಕು. ಬಹಳಷ್ಟು ಸಮಸ್ಯೆ ಆಗುತ್ತಿದೆ. ಅನೇಕ ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದರು.
ಅಧಿಕಾರಿಗಳ ಹೇಳುವುದೇನು? : ಈ ಬಗ್ಗೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಥೋಡ್ ಅವರನ್ನು ವಿಚಾರಿಸಿದಾಗ, ರಸ್ತೆ ಸಮಸ್ಯೆ ಇರುವುದರಿಂದ ಈ ಗ್ರಾಮಗಳಿಗೆ ಬಸ್ಗಳನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಸಂಚಾರಕ್ಕೆ ಯೋಗ್ಯವಾದ ರಸ್ತೆ ನಿರ್ಮಾಣವಾದರೆ ನಾವು ಬಸ್ ಬಿಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯವರು ರಸ್ತೆ ಮಾಡಿಕೊಟ್ಟರೆ ಬಸ್ ಬಿಡುವುದಾಗಿ ಸಾರಿಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟು ವರ್ಷವಾದರೂ ಇಲ್ಲಿ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಅರಣ್ಯದಲ್ಲಿ ಮರ ಕಡಿದರೆ, ಒತ್ತುವರಿ ಮಾಡಿದರೆ ಕಠಿಣ ಕ್ರಮ.. ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ