ಚಿಕ್ಕೋಡಿ: ಅಗತ್ಯ ಪ್ರಮಾಣದ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ತೋಟಪಟ್ಟಿ ನಿವಾಸಿಗಳು ರಾಯಬಾಗ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಕುಳಿತು ಧರಣಿ ನಡೆಸಿದರು.
ಗ್ರಾಮಕ್ಕೆ ದಿನದಲ್ಲಿ ಕೇವಲ ಎರಡು ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗುತ್ತಿದೆ. ರಾತ್ರಿ ವೇಳೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಓದಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಅಲ್ಲದೇ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಈ ಬಗ್ಗೆ ಸಾಕಷ್ಟು ಬಾರಿ ಮೌಖಿಕವಾಗಿ ಮತ್ತು ಮನವಿ ಮೂಲಕ ವಿನಂತಿಸಿಕೊಂಡರೂ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಸರಿಯಾಗಿ ವಿದ್ಯುತ್ ಪೂರೈಸಬೇಕು. ಗ್ರಾಮಕ್ಕೆ ಹೊಸ ಸ್ಟೇಷನ್ ಆಗುವವರೆಗೂ ಮೊರಬ ಗ್ರಾಮದಿಂದ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.