ಬೆಳಗಾವಿ: ಒಂದೆಡೆ ನಿನ್ನೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆಯಿಂದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಕಮಲಪಾಳಯದಲ್ಲಿ ಜೋರಾಗಿಯೇ ನಡೀತಿದೆ. ಹಲವರ ಹೆಸರುಗಳು ಸಿಎಂ ರೇಸ್ನಲ್ಲಿದ್ದು, ಬಿಜೆಪಿ ಹೈಕಮಾಂಡ್ ಮುಂದಿನ ದಂಡನಾಯಕನ ಬಗ್ಗೆ ಚರ್ಚೆ ನಡೆಸಿದೆ. ಇದರ ಬೆನ್ನಲ್ಲೇ ಇತ್ತ ಬೆಳಗಾವಿಯಲ್ಲಿ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸಕ್ಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಂದಾನಗರಿಗೆ ಆಗಮಿಸಿದ್ದಾರೆ. ಈ ವೇಳೆ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.
ನಗರದ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ ನೂರಾರು ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಅಹಲುವಾಲುಗಳನ್ನು ಕೊಟ್ಟು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಕೆಲ ಹೊತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ಬಳಿಕ ಖಾನಾಪುರ, ಬೆಳಗಾವಿ ಗ್ರಾಮೀಣ, ಸೇರಿದಂತೆ ಸಂಕೇಶ್ವರ ತಾಲೂಕಿನಗಳಲ್ಲಿ ಸಂಭವಿಸಿದ ನೆರೆ ಹಾನಿ ಪರಿಶೀಲನೆಗೆ ಪ್ರವಾಸ ಕೈಗೊಂಡರು.
ಈ ವೇಳೆ ಪ್ರವಾಸಿ ಮಂದಿರದಿಂದ ಹೊರಗೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷವಾಕ್ಯ ಕೂಗಿದರು. ಈ ವೇಳೆ ಸಿದ್ದರಾಮಯ್ಯ ಕೂಡ ತಮ್ಮ ಅಭಿಮಾನಿಗಳಿಗೆ ಏನೂ ಸೂಚನೆ ಕೊಡದೇ ತಮ್ಮ ಪಾಡಿಗೆ ತಾವು ಕಾರಿನಲ್ಲಿ ಕುಳಿತು ಖಾನಾಪುರಕ್ಕೆ ತೆರಳಿದರು.
ಕೋವಿಡ್ ನಿಯಮ ಉಲ್ಲಂಘನೆ:
ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖದತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಅವರನ್ನು ಭೇಟಿ ಮಾಡುವ ಭರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಸರಿಯಾಗಿ ಮಾಸ್ಕ್ ದರಿಸದೇ ಫೋಟೋ, ಸೆಲ್ಫಿಗಾಗಿ ಮುಗಿಬಿದ್ದರು.
ಇದನ್ನೂ ಓದಿ: ನಿರಾಣಿ - ಬಿಎಸ್ವೈ ಭೇಟಿ: ರಾಜಕೀಯ ವಲಯದಲ್ಲಿ ಭಾರಿ ಚರ್ಚೆ