ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಸತಿ ಸಹಿತ ಬಿ.ಟೆಕ್ ಹಾಗೂ ಪಿಜಿ ಕೋರ್ಸ್ಗಳಿಗೆ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಔದ್ಯೋಗಿಕ ರಂಗದ ಕ್ಷಿಪ್ರ ಬೆಳವಣಿಗೆಗೆ ತಕ್ಕಂತೆ ಅವಶ್ಯಕ ಕೌಶಲ್ಯದೊಂದಿಗೆ ಎಂಜಿನಿಯರಿಂಗ್ ಪ್ರತಿಭೆಗಳನ್ನು ಸಮಾಜಕ್ಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಥಮ ಬಾರಿಗೆ ಭಾರತದ ಪ್ರಮುಖ ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಮತ್ತು ಕೇಂದ್ರ ಸರ್ಕಾರದ ಆರ್ & ಡಿ ಸಂಸ್ಥೆಗಳ ಸಹಭಾಗಿತ್ವದಲ್ಲಿ 4 ವರ್ಷದ ವಸತಿ ಸಹಿತ ಇನ್ ಕ್ಯಾಂಪಸ್ ಬಿ.ಟೆಕ್ ಹಾಗೂ ಪಿ.ಜಿ ಕೋರ್ಸ್ಗಳನ್ನು ಆರಂಭ ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿ ಅವಶ್ಯವಿರುವ ತಾಂತ್ರಿಕ ವಿಷಯಗಳಾದ ಕಂಪ್ಯೂಟರ್ ಸೈನ್ಸ್ ಅಂಡ್ ಬ್ಯುಸಿನೆಸ್ ಸಿಸ್ಟಮ್, ರೊಬೊಟಿಕ್ಸ್ ಅಂಡ್ ಆಟೋಮೇಷನ್ ಹಾಗೂ ಮೆಕ್ಯಾನಿಕಲ್ ಅಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಈ ಮೂರು ಕೋರ್ಸ್ಗಳನ್ನು ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತಿದ್ದು, ಈ ಕೋರ್ಸ್ಗಳು ಎಐಸಿಟಿಇಯಿಂದ ಅನುಮೋದನೆಗೊಂಡಿವೆ ಎಂದರು.
ವಿಟಿಯು ಭಾರತದ ಪ್ರಮುಖ ಔದ್ಯೋಗಿಕ ರಂಗದ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಕೇಂದ್ರ ಸರ್ಕಾರ ಸ್ವಾಮ್ಯದ ಪ್ರತಿಷ್ಠಿತ ಆರ್&ಡಿ ಸಂಸ್ಥೆ ಕೇಂದ್ರ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ (ಸಿಎಮ್ಟಿಐ) ಮತ್ತು ಎಂ ಟ್ಯಾಬ್ಗಳೊಂದಿಗೆ ಶೈಕ್ಷಣಿಕ ಹಾಗೂ ಸಂಶೋಧನಾ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದ ಪ್ರಕಾರ ಈ ಸಂಸ್ಥೆಗಳಲ್ಲಿ ಹಾಗೂ ಕಂಪನಿಗಳಲ್ಲಿರುವ ವಿಷಯ ಪರಿಣಿತರು ಹೊಸ ಕಾರ್ಯಕ್ರಮಗಳಿಗಾಗಿ ಹೊಸ ಕ್ಷೇತ್ರಗಳ ಬೆಳವಣಿಗೆಯ ಬಗ್ಗೆ ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ತರಬೇತಿ, ಅತಿಥಿ ಉಪನ್ಯಾಸಗಳ ಆಯೋಜನೆ, ಇಂಟರ್ನಶಿಪ್ ಮತ್ತು ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನಕ್ಕಾಗಿ ವಿಶ್ವವಿದ್ಯಾಲಯದೊಂದಿಗೆ ತೊಡಗಿಸಿಕೊಳ್ಳಲಿವೆ ಎಂದು ಉನ್ನತ ಶಿಕ್ಷಣ ಸಚಿವರು ಮಾಹಿತಿ ನೀಡಿದರು.
ಕೋರ್ಸ್ಗಳಿಗೆ ಚಾಲನೆ ನೀಡುವ ವೇಳೆ ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ, ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ. ಸತೀಶ್ ಅಣ್ಣಿಗೇರಿ, ಹಣಕಾಸು ಅಧಿಕಾರಿ ಎಂ.ಎ.ಸಪ್ನ ಭಾಗಿಯಾಗಿದ್ದರು.