ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಕಟ್ಟಡವೊಂದರ ಕಾಂಪೌಂಡ್‌ನಲ್ಲಿ ಬಿಸಾಕಿದ್ದ ನವಜಾತ ಗಂಡು ಶಿಶು ರಾತ್ರಿಯಿಡೀ ನರಳಾಡಿ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ನಡೆದಿದೆ. ಇದು ಯಾರ ಮಗು, ಎಸೆದವರು ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ತಾಯಿಯ ಮಡಿಲಲ್ಲಿ ಆರೈಕೆಯಾಗಬೇಕಿದ್ದ ಶಿಶುವನ್ನು ಗಿಡಗಂಟಿಯಲ್ಲಿ ಎಸೆದು ಅಮಾನವೀಯತೆ ತೋರಿದ್ದಾರೆ. ಪೋಷಕರೇ ಶಿಶುವನ್ನು ಬಿಸಾಕಿದ್ದಾರೆಯೇ ಅಥವಾ ಬೇರೆ ಯಾರಾದರೂ ಈ ಕೃತ್ಯ ಎಸಗಿದ್ದಾರಾ ಎಂಬುದು ಪತ್ತೆಯಾಗಬೇಕಿದೆ.
ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾತ್ರಿಯಿಡೀ ನರಳಿ ನರಳಿ ಪ್ರಾಣಬಿಟ್ಟ ಶಿಶುವಿನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಮ್ಮಲ ಮರುಗಿದ ಜನ: ಗಿಡಗಂಟಿಗಳ ಮಧ್ಯೆ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ನೋಡಿದ ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದರು. ಆದ್ರೆ ಅದಾಗಲೇ ಶಿಶು ಮೃತಪಟ್ಟಿತ್ತು. ಆಗ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಆಗಮಿಸಿ, ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕಂದಮ್ಮ ಕಣ್ಣು ಬಿಡುವ ಮುನ್ನವೇ ಮೃತಪಟ್ಟಿರುವುದನ್ನು ನೋಡಿ ಸ್ಥಳೀಯರು ಮಮ್ಮಲ ಮರುಗಿ, ಮಗು ಬಿಸಾಕಿ ಹೋದವರಿಗೆ ಹಿಡಿಶಾಪ ಹಾಕಿದರು.
ಇದನ್ನೂ ಓದಿ: UP Shocker! ಆಂಬ್ಯುಲೆನ್ಸ್ ಸಿಗದೆ ರಿಕ್ಷಾದಲ್ಲಿ ತೆರಳುತ್ತಿದ್ದ ಗರ್ಭಿಣಿಗೆ ರಾಜಭವನದೆದುರು ಹೆರಿಗೆ; ಶಿಶು ಸಾವು
ಕಳೆದ ತಿಂಗಳು ಕಲಬುರಗಿಯಲ್ಲಿ ನಡೆದ ಘಟನೆ: ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಕಳೆದ ತಿಂಗಳು ರಸ್ತೆ ಬದಿಯ ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿತ್ತು. ಮಗು ಅಳುವ ಶಬ್ದ ಕೇಳಿ ಸ್ಥಳೀಯರು, ರಕ್ಷಿಸಿ ಮಾನವೀಯತೆ ಮೆರೆದಿದ್ದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶಿಶುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮಗು ಆರೋಗ್ಯವಾಗಿತ್ತ.
ಇದನ್ನೂ ಓದಿ: ಬಡತನಕ್ಕೆ ಸೋತು ತನ್ನ ನವಜಾತ ಕಂದನನ್ನೇ ಮಾರಾಟ ಮಾಡಿದ ತಂದೆ.. ಇದು ನಡೆದಿದ್ದು ಎಲ್ಲಿ?
ಧಾರವಾಡದಲ್ಲಿ ಚರಂಡಿಯಲ್ಲಿ ಪತ್ತೆಯಾಗಿದ್ದ ಶಿಶು: ಧಾರವಾಡದ ಮೌನೇಶ್ವರ ಗುಡಿ ಓಣಿಯ ರಸ್ತೆ ಚರಂಡಿಯಲ್ಲಿ ಮೂರು ತಿಂಗಳ ಹಿಂದೆ ನವಜಾತ ಗಂಡು ಶಿಶು ಪತ್ತೆಯಾಗಿತ್ತು. ಮಗು ಅಳುವ ಶಬ್ದ ಕೇಳಿದ ನಂತರ ರಕ್ಷಿಸಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬಸ್ಸ್ಟ್ಯಾಂಡ್ನಲ್ಲಿ ಗಂಡು ಮಗು ಪತ್ತೆ : ಚಾಮರಾಜನಗರದ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ನಲ್ಲಿ 7 ದಿನದ ಗಂಡು ಶಿಶು ಪತ್ತೆಯಾಗಿತ್ತು. ಸುಮಾರು ಹೊತ್ತು ಬಸ್ ನಿಲ್ದಾಣದಲ್ಲಿದ್ದ ಬ್ಯಾಗ್ ತೆರೆದು ನೋಡಿದಾಗ ಗಂಡು ಮಗು ಇರುವುದು ಗೊತ್ತಾಗಿತ್ತು.