ಚಿಕ್ಕೋಡಿ: ಐತಿಹಾಸಿಕ ಕೆರೆ ದುರಸ್ತಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಕೆರೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತು ಕೆರೆ ಒಡೆಯುವ ಅಪಾಯ ಎದುರಾಗಿದೆ.
ಜಿಲ್ಲೆಯ ರಾಯಬಾಗ ತಾಲೂಕಿನ ಕಬ್ಬೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೀರಾಪುರಹಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಅತಿ ದೊಡ್ಡದಾದ ಐತಿಹಾಸಿಕ ಕೆರೆ ಇದೆ. ಈ ಕೆರೆಯು ನಾಲ್ಕೈದು ಗ್ರಾಮಗಳ ಸಾವಿರಾರು ಎಕರೆ ಭೂಮಿಗೆ ನೀರಾವರಿ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರಕಿಸುತ್ತಿದೆ. ಆದ್ರೆ ಕೆರೆಯಲ್ಲಿ ಬೆಳೆದು ನಿಂತಿರುವ ಗಿಡಗಂಟೆಗಳ ಬೇರಿನಿಂದ ನೀರು ಬಸಿದು, ಬಿರುಕು ಬಿಟ್ಟು ಕೆರೆ ಅಪಾಯ ಮಟ್ಟಕ್ಕೆ ತಲುಪಿದೆ.
ರಾಯಬಾಗ ತಾಲೂಕಿನ ಕಬ್ಬೂರು, ಮೀರಾಪುರಹಟ್ಟಿ ಜೋಡಟ್ಟಿ, ವಿಜಯನಗರ ಮುಂತಾದ ಗ್ರಾಮದ ರೈತರಿಗೆ ಈ ಕೆರೆ ವರದಾನವಾಗಿದೆ. ಜೊತೆಗೆ ಈ ಭಾಗದ ಕೊಳವೆ ಬಾವಿ, ತೆರೆದ ಬಾವಿಗಳ ಅಂತರ್ಜಲ ಮಟ್ಟ ವೃದ್ಧಿಸುವ ಮೂಲವಾಗಿದೆ.
ಕಳೆದ 10 ವರ್ಷಗಳ ಹಿಂದೆಯಷ್ಟೇ ನಡು ರಾತ್ರಿಯಲ್ಲಿ ಕೆರೆ ಒಡೆದು ಸುತ್ತಮುತ್ತಲಿನ ರೈತರ ನೂರಾರು ಎಕರೆ ಬೆಳೆ ನಾಶವಾಗಿತ್ತು. ಆದರೆ, ಈಗ ಮತ್ತೆ ಕೆರೆಯ ಮಧ್ಯದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಈಗ ಮತ್ತೆ ಐತಿಹಾಸಿಕ ಕೆರೆ ಅಪಾಯದಲ್ಲಿದ್ದು ಯಾವ ಸಂದರ್ಭದಲ್ಲಾದರೂ ಒಡೆಯಬಹುದು. ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನುತ್ತಿಲ್ಲ ಅಂತಾರೆ ಸ್ಥಳೀಯರು.