ಬೆಳಗಾವಿ: ಹೊಲದಲ್ಲಿ ಕಿಡಿಗೇಡಿಗಳು ಎಸೆದು ಹೋಗಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕಪ್ ಮತ್ತು ಚೀಲಗಳನ್ನು ಸ್ವಚ್ಛಗೊಳಿಸುವ ಮೂಲಕ ಬೆಳಗಾವಿಯಲ್ಲಿ ರೈತರು ವಿಭಿನ್ನವಾಗಿ ರಾಷ್ಟ್ರೀಯ ರೈತ ದಿನ ಆಚರಿಸಿದರು.
ಹೌದು ಬೆಳಗಾವಿ ಯಳ್ಳೂರ ರಸ್ತೆಯ ರೈತರ ಜಮೀನುಗಳಲ್ಲಿ ಕಿಡಿಗೇಡಿಗಳು ರಾತ್ರಿ ಹೊತ್ತು ಪಾರ್ಟಿ ಮಾಡಿ ಎಣ್ಣೆ ಬಾಟಲಿ ಸೇರಿ ಮತ್ತಿತರ ವಸ್ತುಗಳನ್ನು ಬೀಸಾಕಿ ಹೋಗುತ್ತಾರೆ. ಇದರಿಂದ ಕೃಷಿ ಚಟುಚಟಿಕೆಗಳಿಗೆ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ಈ ಬಗ್ಗೆ, ಸಂಬಂಧಿಸಿದ ಅಧಿಕಾರಿಗಳು ಮತ್ತು ಪೊಲೀಸರಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಡಿಸೆಂಬರ್ 23 ರಾಷ್ಟ್ರೀಯ ರೈತ ದಿನದ ಹಿನ್ನೆಲೆ ಇಂದು ರೈತರ ಹೊಲದಲ್ಲಿ ಬಿದ್ದಿದ್ದ ಸಾರಾಯಿ ಬಾಟಲಿ ಮತ್ತು ಕಸವನ್ನು ಹೊರತೆಗೆದು ಅರ್ಥಪೂರ್ಣವಾಗಿ ರೈತರ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯಿಕ, ಕುಡುಕರ ಹಾವಳಿಯಿಂದ ಕೃಷಿ ಕೆಲಸಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇಂದು ಮಾಜಿ ಪ್ರಧಾನಿ ಚರಣಸಿಂಗ್ ಚೌಧರಿ ಅವರ ಜನ್ಮದಿನ ನಿಮಿತ್ತ ಹೊಲದಲ್ಲಿ ಸ್ವಚ್ಛತೆ ಕೈಗೊಂಡಿದ್ದೇವೆ. ಇನ್ಮುಂದೆ ಈ ರೀತಿ ಬಾಟಲಿಗಳು ನಮ್ಮ ಹೊಲದಲ್ಲಿ ಕಂಡು ಬಂದರೆ ಅವೆಲ್ಲವನ್ನೂ ಡಿಸಿ, ಮಹಾನಗರ ಪಾಲಿಕೆ, ಅಬಕಾರಿ ಇಲಾಖೆ ಮುಂದೆ ನಾವು ಬೀಸಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು: ರೈತರು ಪ್ರಧಾನಿ ಆಗಬೇಕು. ಈ ದೇಶದ ನೇತಾರ ಆಗಬೇಕು. ಅಂದಾಗ ಮಾತ್ರ ರೈತರ ಸಮಸ್ಯೆಗಳು ನಿವಾರಣೆ ಆಗುತ್ತವೆ. ರೈತರಿಗೆ ಆರ್ಥಿಕ ಭದ್ರತೆ ನೀಡಬೇಕು. ಬೆಳೆದ ಬೆಳೆಗಳಿಗೆ ಸೂಕ್ತ ದರ ನೀಡಬೇಕು. ಇವತ್ತಿನ ಜನಪ್ರತಿನಿಧಿಗಳು ಲೂಟಿಕೋರರಿದ್ದಾರೆ. ಹಾಗಾಗಿ, ರೈತರು ಅಧಿಕಾರ ಹಿಡಿದರೆ ಮಾತ್ರ ರೈತ ಸಮುದಾಯ ಉದ್ದಾರ ಆಗಬಹುದು ಎಂದು ಅಭಿಪ್ರಾಯ ಪಟ್ಟರು.
ಮೂರು ಕೃಷಿ ಕಾಯ್ದೆ:ರೈತ ಮುಖಂಡ ರಾಜು ಮರ್ವೆ ಮಾತನಾಡಿ, ಯಾವುದೇ ಸರ್ಕಾರ ಬಂದರೂ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ. ರೈತರು ದೇಶದ ಬೆನ್ನೆಲುಬು ಎಂದು ಹೇಳುವ ಆಳುವ ಸರ್ಕಾರಗಳು ನಮ್ಮನ್ನು ಭೂಮಿಯಲ್ಲಿ ತುಳಿಯುವ ಕೆಲಸ ಮಾಡುತ್ತಿವೆ. ಇನ್ನು ಭರವಸೆ ನೀಡಿದಂತೆ ಕಾಂಗ್ರೆಸ್ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತಿಲ್ಲ. ಕೇಂದ್ರದ ಫಸಲ್ ಭೀಮಾ ಪರಿಹಾರ ಬಂದಿಲ್ಲ. 2 ಸಾವಿರ ರೂ. ಬರ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಪ್ರತಿ ಎಕರೆಗೆ 25 ಸಾವಿರ ರೂ. ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.
ಇದನ್ನೂಓದಿ:ರಾಮನಗರ: ಗ್ರಾಮಕ್ಕೆ ನುಗ್ಗಿದ 12 ಕಾಡಾನೆಗಳು.. ಜನರಲ್ಲಿ ಹೆಚ್ಚಿದ ಆತಂಕ