ಬೆಳಗಾವಿ: ಪಾಟ್ನಾದಲ್ಲಿ ತೃತೀಯ ರಂಗದ ನಾಯಕರು ಸಭೆ ಮಾಡಿದ್ದಾರೆ. ಅಲ್ಲಿ ದೇಶದ ಉದ್ಧಾರದ ಬಗ್ಗೆ ಚರ್ಚೆ ಆಗಿಲ್ಲ, ನರೇಂದ್ರ ಮೋದಿ ಅವರನ್ನು ಹೇಗೆ ಸೋಲಿಸಬೇಕು. ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯ ಗಾಂಧಿ ಭವನದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸೋಲಲ್ಲ. ರಾಹುಲ್ ಗಾಂಧಿಗೆ ಮದುವೆ ಆಗೋದಿಲ್ಲ. ಮೋದಿಗೆ ಪರ್ಯಾಯವಾಗಿ ಒಬ್ಬ ನಾಯಕನ ಸೃಷ್ಟಿ ಮಾಡಲಾಗದಿರುವ ನಿಮ್ಮನ್ನು ಜನ ಹೇಗೆ ಆಯ್ಕೆ ಮಾಡುತ್ತಾರೆ. ನರೇಂದ್ರ ಮೋದಿ ಅವರಿಗೆ ಇಡೀ ದೇಶದಲ್ಲಿ ಎದುರಿಗೆ ನಿಲ್ಲುವಂತ ಒಬ್ಬನೇ ಒಬ್ಬ ನಾಯಕ ಯಾವುದೇ ವಿರೋಧ ಪಕ್ಷದಲ್ಲಿಲ್ಲ. ಮೋದಿ ನಾಯಕತ್ವ ಇಡೀ ದೇಶ ಒಪ್ಪಿಕೊಂಡಿದೆ. ಹೀಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. 25 ಸ್ಥಾನ ಮತ್ತೆ ರಾಜ್ಯದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಮಕೃಷ್ಣ ಹೆಗಡೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಅವರು ಸರ್ಕಾರವನ್ನು ವಿಸರ್ಜಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಮತ್ತೆ ಬಹುಮತದಿಂದ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂದಿತು. ಅದೇ ರೀತಿ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆದರೂ ನಾವು 18 ಸ್ಥಾನ ಗೆದ್ದಿದ್ದೆವು. ಇದಾದ ಬಳಿಕ 2019ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ 28ರಲ್ಲಿ 25 ಸ್ಥಾನಗಳನ್ನು ಗೆದ್ದಿದ್ದೆವು. ಹೀಗಾಗಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ವಿಚಾರಗಳು ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ ಎಲ್ಲರೂ ಸಂಕಲ್ಪ ಮಾಡಬೇಕು, 28ಕ್ಕೆ 28 ಸ್ಥಾನ ಗೆಲ್ಲಬೇಕು. ಬೆಳಗಾವಿ ಲೋಕಸಭೆಯಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಲು ತಾವೆಲ್ಲಾ ಪಣ ತೊಡಬೇಕು ಎಂದು ಕಾರ್ಯಕರ್ತರಿಗೆ ಬೊಮ್ಮಾಯಿ ಸಲಹೆ ನೀಡಿದರು.
ನೀರು, ಆಕಾಶ, ಭೂಮಿಯಲ್ಲೂ ಕಾಂಗ್ರೆಸ್ ಹಗರಣ: ಕಾಂಗ್ರೆಸ್ ಅವಧಿಯಲ್ಲಿ ದೇಶದಲ್ಲಿ ನೀರು, ಆಕಾಶ ಮತ್ತು ಭೂಮಿಯಲ್ಲೂ ಸಾವಿರಾರು ಕೋಟಿ ಹಗರಣ ಮಾಡಿದ್ದರು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಹಗರಣಗಳಿಗೆ ಅವಕಾಶ ನೀಡಿಲ್ಲ. ಸ್ವಚ್ಛ ಮತ್ತು ದಕ್ಷ ಆಡಳಿತ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದ ಬೊಮ್ಮಾಯಿ, 12 ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ. ಜಲಜೀವನ್ ಮಿಶನ್ ಯೋಜನೆಯಡಿ ದೇಶದಲ್ಲಿ 11 ಕೋಟಿ ಮನೆಗಳಿಗೆ, ಕರ್ನಾಟಕದಲ್ಲಿ 40 ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ.
ಸುಮಾರು 2.5 ಕೋಟಿ ಮನೆ ನಿರ್ಮಾಣ ಆಗಿವೆ. ಮುದ್ರಾ, ಆಯುಷ್ಮಾನ್, ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೇಶದ 57 ಲಕ್ಷ ರೈತರಿಗೆ ವರ್ಷಕ್ಕೆ 10 ಸಾವಿರ ರೂ. ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರೀ ದೇಶದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಆಗುತ್ತಿದ್ದವು. ಪಾಕಿಸ್ತಾನದ ಸೊಕ್ಕನ್ನು ಅಡಗಿಸಿದ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಈ ಕಡೆ ತಿರುಗಿ ನೋಡದಂತೆ ಮಾಡಿದ್ದಾರೆ. ದೇಶದ ಅಖಂಡತೆ, ಏಕತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ: ಗೋಹತ್ಯೆ ನಿಷೇಧ, ಮತಾಂತರ ಕಾನೂನು, ದೇವಾಲಯಗಳ ರಕ್ಷಣೆ, ದೇವಸ್ಥಾನಗಳ ದುಡ್ಡು ದೇವಸ್ಥಾನಕ್ಕೆ ಕೊಡುವುದನ್ನು ಮಾಡಿದ್ದೇವೆ. ನಮ್ಮ ಧರ್ಮ, ಸಂಸ್ಕೃತಿ, ರಾಜ್ಯ, ಜನರನ್ನು ಉಳಿಸುವ ಕೆಲಸ ಮಾಡಿದ್ದೇವೆ. ಆಸೆ, ಆಮಿಷಗಳಿಂದ ಏನಾಗಲಿದೆ ಎಂಬುದು ಗೊತ್ತಾಗಲಿದೆ. ಕೆಎಸ್‌ಆರ್‌ಟಿಸಿ ಮುಚ್ಚುವ ಸ್ಥಿತಿ ನಿರ್ಮಾಣ ಆಗಿದೆ. ಡೀಸೆಲ್ ಇಲ್ಲದೇ ಬಸ್ಗಳು ನಿಲ್ಲಲಿವೆ. ಕರ್ನಾಟಕ ಕತ್ತಲಲ್ಲಿ ಮುಳುಗುವ ಸ್ಥಿತಿ ನಿರ್ಮಾಣ ಆಗಲಿದೆ ಎಂದು ಅಭಿಪ್ರಾಯ ತಿಳಿಸಿದರು.
ಗ್ಯಾರಂಟಿಗೆ ಕಂಡಿಷನ್ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ ಬೊಮ್ಮಾಯಿ, ಒಂದು ತಿಂಗಳಲ್ಲಿ ಒಂದು ಸರ್ಕಾರ ಇಷ್ಟು ಜನಪ್ರಿಯತೆ ಕಳೆದುಕೊಂಡು ಭ್ರಮನಿರಸನ ಆಗಿರುವುದು ಇತಿಹಾಸದಲ್ಲಿ ಬೇರೆ ಯಾವುದೇ ಸರ್ಕಾರ ಇಲ್ಲ. ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ. ಈ ಬಗ್ಗೆ ಅವರಿಗೆ ಚಿಂತನೆ ಇಲ್ಲ. ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಯಾವ ನೈತಿಕತೆ ಇದೆ. ಸರ್ಕಾರದಲ್ಲಿದ್ದುಕೊಂಡು ಅವರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಎಲ್ಲ ಕಡೆ ಪರ್ಸ್ಂಟೇಜ್ ಫಿಕ್ಸ್: ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ ಏನಾಗಿದೆ ಎಂಬುದು ನನಗೆ ಗೊತ್ತು. ಕೆಲವೇ ದಿನಗಳಲ್ಲಿ ಅವರ ಬಣ್ಣ ಬಯಲು ಆಗಲಿದೆ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ರು, ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಗೊತ್ತು, ದೆಹಲಿಯವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಎಲ್ಲ ಕಡೆಗಳ ಪರ್ಸಂಟೇಜ್ ಫಿಕ್ಸ್ ಆಗುತ್ತಿವೆ ಎಂದು ಆರೋಪಿಸಿದರು.
ವಿಧಾನಸಭೆ ಚುನಾವಣೆಯ ಸೋಲಿನ ಹೊಣೆಯನ್ನು ನಾನು ಹೊತ್ತುಕೊಂಡಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದ ಐದೂವರೆ ಸಾವಿರ ಕೋಟಿ ನೀರಾವರಿಗೆ ಕೊಟ್ಟಿದ್ದೇನೆ. ಉಕ ಅಭಿವೃದ್ಧಿ ಕಂಕಣ ಬದ್ಧನಾಗಿದ್ದೆ. ಕಲ್ಯಾಣ ಕರ್ನಾಟಕಕ್ಕೆ ಐದು ಸಾವಿರ ಕೋಟಿ ಬಜೆಟ್ ನಲ್ಲಿ ಇಟ್ಟಿದ್ದೇನೆ. ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎಂದು ಕೇಳಿದವರಿಗೆ ಬೆಳಗಾವಿ ರೈಲ್ವೆ ನಿಲ್ದಾಣ ಹೇಗಾಗಿದೆ ಎಂದು ತೋರಿಸಿ. ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಆದರೆ ಜನರಿಗೆ ಇವುಗಳ ಬಗ್ಗೆ ತಿಳಿಸಲು ನಾವು ವಿಫಲರಾದೆವು ಎಂದು ವಿಷಾದ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕರನ್ನು ಮನೆಗೆ ಸೇರಿಸಿಕೊಳ್ಳಬೇಡಿ ಎಂದಿದ್ದ ಯತ್ನಾಳ್ಗೆ ವೇದಿಕೆ ಮೇಲೆಯೇ ತಿರುಗೇಟು ಕೊಟ್ಟ ಬೊಮ್ಮಾಯಿ, ಮನೆಗೆ ಬಂದಿದ್ದಾರೆ ಎಂದರೆ ಅವರನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ. ಆದರೆ ರಾಜಕಾರಣದಲ್ಲಿ ಎಂದಿಗೂ ರಾಜಿ ಆಗುವ ಪ್ರಶ್ನೆಯೇ ಇಲ್ಲ. ನಾವು ನಿಮ್ಮ ಜೊತೆ ಇದ್ದೇವೆ ಎಂದು ಯತ್ನಾಳ್ಗೆ ಹೇಳಿದರು.
ಇದನ್ನೂಓದಿ:ಮೋದಿ ಜನಪ್ರಿಯತೆ ಮಂಕಾಗಿದೆ, ಕರ್ನಾಟಕದಲ್ಲಿ ಮೋದಿ ವರ್ಚಸ್ಸು ನಂಬಿದ್ದ ಬಿಜೆಪಿ ಧೂಳಿಪಟ ಆಯ್ತು: ಸಿಎಂ ಸಿದ್ದರಾಮಯ್ಯ