ಬೆಳಗಾವಿ: ಶೀಘ್ರದಲ್ಲೇ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು. ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲಾಗುವುದು. ಇದರಿಂದ ರೈತರಿಗೆ ವರದಾನವಾಗಲಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶೀಥಲಿಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಹಾಲಿನ ದರ ಪರಿಷ್ಕರಣೆಯ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ. ರಾಜ್ಯದ 16 ಹಾಲು ಒಕ್ಕೂಟಗಳು, ಕೆಎಂಎಫ್ ವತಿಯಿಂದ ದರ ಪರಿಷ್ಕರಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯ ಎಂದರು.
ಉತ್ತರ ಕರ್ನಾಟಕ ಭಾಗದ ರೈತರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ. ರೈತರ ಹಿತಾಸಕ್ತಿಗೆ ಬದ್ಧರಾಗಿ ನಾವು ಕೆಲಸ ಮಾಡುತ್ತಿದ್ದೇವೆ. 400 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ಲಾಂಟ್ ನಿರ್ಮಿಸಲಾಗುವುದು. ಇದರಿಂದಾಗಿ 5 ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವುದರಿಂದ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಹಾಗಾಗಿ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ಹೈನುಗಾರರ ಹಿತಕ್ಕೂ ನಾವು ಬದ್ಧ ಎಂದು ಹೇಳಿದರು.
ದಕ್ಷಿಣ ಕರ್ನಾಟಕ ರೈತರು ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗೆ ರೈತರು ಹೆಚ್ಚು ಒತ್ತು ನೀಡಿದ್ದಾರೆ. ಹೈನುಗಾರಿಕೆ ಉತ್ಪಾದನೆಯಲ್ಲಿ ದೇಶದಲ್ಲಿ ನಂ.1 ಅಮೂಲ್ ಇದ್ದರೆ, ನಂ. 2ರ ಸ್ಥಾನದಲ್ಲಿ ಕೆಎಂಎಫ್ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಬ್ಬಗಳ ಸೀಸನ್ನಲ್ಲೇ ಗ್ರಾಹಕರಿಗೆ ಶಾಕ್.. ಅಮುಲ್, ಮದರ್ ಡೈರಿ ಹಾಲಿನ ದರ ಏರಿಕೆ