ಬೆಳಗಾವಿ : ದೇಶದ ಕಾನೂನಿನ ಬಗ್ಗೆ ಗೌರವ ಇಲ್ಲದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದರು.
ಈ ಕುರಿತು ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ಸಂಬಂಧ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ದಿ. ಸುರೇಶ್ ಅಂಗಡಿ ಅವರು ಮೋದಿ ಅವರ ಸಂಪುಟದಲ್ಲಿದ್ದರು.
ಈ ಕಾರಣಕ್ಕೆ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲಾಗಲಿಲ್ಲ. ತಂದಿದ್ದರೆ ದೇಶಕ್ಕೆ ತಪ್ಪು ಸಂದೇಶ ರವಾನೆ ಆಗುತ್ತಿತ್ತು. ಆದರೆ, ನಮ್ಮ ಸರ್ಕಾರವೇ ದೆಹಲಿಯಲ್ಲಿ ಅಂಗಡಿ ಅವರ ಅಂತ್ಯಕ್ರಿಯೆ ನಿರ್ವಹಿಸಿ, ಅವರ ಪುತ್ಥಳಿಯನ್ನು ಸಹ ನಿರ್ಮಿಸಿದೆ.
ಅಂಬೇಡ್ಕರ್ ಹೆಸರಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು ಅವರ ಅಂತ್ಯಕ್ರಿಯೆಗೆ ಸ್ಥಳ ನೀಡಲಿಲ್ಲ. ಹೀಗಾಗಿ, ಸುರೇಶ್ ಬಗ್ಗೆ ಮಾತನಾಡುವ ನೈತಿಕತೆ ಡಿಕೆಶಿ ಅವರಿಗಿಲ್ಲ. ಅವರು ಕಾನೂನಿಗೆ ಗೌರವ ಕೊಡುವುದಿಲ್ಲ. ಹೀಗಾಗಿಯೇ, ಅವರು ತಿಹಾರ ಜೈಲಿಗೆ ಹೋಗಿ ಬರಬೇಕಾಯಿತು ಎಂದರು.
ಸಾಮರ್ಥ್ಯ ಹೊಂದಿದ್ದಾರೆ : ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಿಂದ ಸಚಿವ ಉಮೇಶ್ ಕತ್ತಿ, ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ದೂರ ಉಳಿದಿದ್ದಾರಲ್ಲ ಎಂಬ ಪ್ರಶ್ನೆಗೆ, ಇದೇನು ಲೋಕಸಭೆ ಚುನಾವಣೆ ಅಲ್ಲ. ಕತ್ತಿ-ಜಾರಕಿಹೊಳಿ ಸಹೋದರರು ಪ್ರಚಾರಕ್ಕೆ ಬರಬೇಕು ಎಂದೇನಿಲ್ಲ. ಅವರು ಬರದಿದ್ದರೂ ಮತ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಉಮೇಶ್ ಕತ್ತಿ ಹಾಗೂ ಜಾರಕಿಹೊಳಿ ಸಹೋದರರ ಜೊತೆಗೆ ಮಾತನಾಡಿದ್ದೇನೆ. ನಾಳೆಯಿಂದ ಉಮೇಶ್ ಕತ್ತಿ ಪ್ರಚಾರ ನಡೆಸಲಿದ್ದಾರೆ ಎಂದರು.
ಕಠಿಣ ಕ್ರಮ ಜರುಗಿಸಲಿದೆ : ಬೆಲೆ ಏರಿಕೆ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ಕ್ರಮವಹಿಸುತ್ತಿದೆ. ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದ್ರೆ ಈಗ ಪರಿಸ್ಥಿತಿ ಬೇರೆ ಇದೆ. ಶೀಘ್ರವೇ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ. ಕಾಂಗ್ರೆಸ್ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 45 ಸ್ಥಾನ ಗಳಿಸಲಿದೆ. ಮೊದಲ ಬಾರಿಗೆ ಚುನಾವಣೆ ಇದ್ದಿದಕ್ಕೆ 55 ಸ್ಥಾನದಲ್ಲಿ ಸ್ಪರ್ಧಿಸಲಾಗಿದೆ. ಬಂಡುಕೋರರ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ. ಅವರ ವಿರುದ್ಧ ಪಕ್ಷ ಕಠಿಣ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.
ಓದಿ: ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಧ್ಯಮಗೋಷ್ಠಿ : ನೇರಪ್ರಸಾರ