ಬೆಳಗಾವಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಅದಾಗಲೇ ಕೈ-ಕಮಲ ನಾಯಕರು ಅಖಾಡಕ್ಕೆ ಇಳಿದಿದ್ದಾರೆ.
ಕಳೆದ ವಾರವಷ್ಟೇ ಬೆಳಗಾವಿಗೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಸಲಹೆ ನೀಡಿದ್ದರು. ಅಲ್ಲದೇ ಬೆಳಗಾವಿ ಲೋಕಸಭೆ ಆಕಾಂಕ್ಷಿಗಳ ಜೊತೆಗೆ ಸಭೆ ನಡೆಸಿ ಚುನಾವಣೆಗೆ ಸಿದ್ಧರಾಗುವಂತೆ ನಿರ್ದೇಶನ ನೀಡಿದ್ದರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಕೂಡ ಅಖಾಡಕ್ಕೆ ಇಳಿದಿದ್ದು, ನಾಳೆಯಿಂದ ಎರಡು ದಿನ ಬೆಳಗಾವಿಯಲ್ಲಿ ಠಿಕಾಣಿ ಹೂಡಲಿದ್ದಾರೆ.
ನಾಳೆ ಸಂಜೆ 4 ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ನಳೀನ್ ಕುಮಾರ್ ಕಟೀಲ್ ಸಂಜೆ 5 ಗಂಟೆಗೆ ಬೆಳಗಾವಿ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಮೊದಲು ಬೆಳಗಾವಿ ಮಹಾನಗರ ಬಿಜೆಪಿ ಪದಾಧಿಕಾರಿಗಳ ಜತೆ ಸಭೆ ನಡೆಸಲಿರುವ ಕಟೀಲ್, ಬಳಿಕ ಬೆಳಗಾವಿ ಗ್ರಾಮೀಣ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಿಜೆಪಿಯ ಶಕ್ತಿ ಕೇಂದ್ರದ ಪ್ರಮುಖರ ಜತೆಗೂ ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಪಾಠ ಮಾಡಲಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮುಂಬರುವ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಯಾರಿಗೆ ನೀಡಬೇಕು ಎಂಬ ಕುರಿತಂತೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ನಾಳೆ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿರುವ ನಳೀನ್ ಕುಮಾರ್ ಕಟೀಲ್ ಭಾನುವಾರ ಚಿಕ್ಕೋಡಿಗೆ ತೆರಳಿ ಚಿಕ್ಕೋಡಿ ಬಿಜೆಪಿ ಪದಾಧಿಕಾರಿಗಳ ಜತೆಯೂ ಸಭೆ ನಡೆಸಲಿದ್ದಾರೆ.