ಚಿಕ್ಕೋಡಿ: ಲಾಕ್ಡೌನ್ನಿಂದ ಜನರಿಗೆ ಅನೇಕ ರೀತಿಯ ಸಮಸ್ಯೆ ಉಂಟಾಗಿದ್ದು, ಅವರ ಸಮಸ್ಯೆಗೆ ಸ್ಪಂದಿಸಲು ಯಾವ ಸರ್ಕಾರವಾಗಲಿ, ದಾನಿಗಳಾಗಲಿ ಮುಂದೆ ಬಂದಿಲ್ಲ. ದುಡಿದು ತಿನ್ನಬೇಕು ಎಂದರೆ ಹೊರಗಡೆ ಪೊಲೀಸರ ಕಾಟ. ಎಲ್ಲದರ ನಡುವೆ ವಾರಕ್ಕೊಮ್ಮೆ ಸಂಘಗಳ ಕಾಟ. ಎಲ್ಲದಕ್ಕೂ ಎಲ್ಲಿಂದ ಹಣ ಕೂಡಿ ಹಾಕುವುದು ಎಂದು ನಾಗರಮುನ್ನೊಳಿ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಸರ್ಕಾರದಿಂದ ನಮಗೆ ಏನಾದರೂ ಸಹಾಯ ಮಾಡಿ. ಇಲ್ಲ ಅಂದರೆ ನಮ್ಮನ್ನು ದುಡಿಯಲು ಬಿಡಿ ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಬಡವರಿಗೆ ಯಾವುದೇ ರೀತಿಯ ಸಹಾಯ ಮಾಡುತ್ತಿಲ್ಲ. ರೇಷನ್ ಕಾರ್ಡ್ ಇದ್ದವರಿಗೆ ಅಕ್ಕಿ, ಬೇಳೆ ಕೊಡುತ್ತಿರುವ ಸರ್ಕಾರ, ರೇಷನ್ ಕಾರ್ಡ್ ಇಲ್ಲದೇ ಇರುವವರು ಏನು ಮಾಡಬೇಕು ಎಂದು ಸ್ಥಳೀಯ ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.
ಎಷ್ಟೋ ಜನ ರೇಷನ್ ಕಾರ್ಡ್ ಇಲ್ಲದ ಕಾರಣ ಅಕ್ಕಿ-ಬೇಳೆ ಸಿಗದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಾಗರಮುನ್ನೊಳಿಯಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಇಲ್ಲಿನ ಶಾಸಕರು, ಪಂಚಾಯಿತಿ ಸದಸ್ಯರು ಯಾವ ರೀತಿಯ ಸಹಾಯ ಕಲ್ಪಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.