ಅಥಣಿ: ನೆರೆ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ಆರೋಪಿಸಿ ನೆರೆ ಸಂತ್ರಸ್ತ ಮಹಿಳೆಯರು ಗ್ರಾಮ ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾವ ಗ್ರಾಮದಲ್ಲಿ ನಡೆದಿದೆ.
ನದಿ ಇಂಗಳಗಾವ ಗ್ರಾಮದಲ್ಲಿ ನೆರೆ ಪರಿಹಾರದ ತಾರತಮ್ಯ ವಿರೋಧಿಸಿ ಕಚೇರಿಗೆ ನುಗ್ಗಿದ ಸಂತ್ರಸ್ತರು ಪಂಚಾಯಿತಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು, ಅಧಿಕಾರಿಗಳನ್ನು ಕಚೇರಿಯಿಂದ ಹೊರ ಹಾಕಿ ನಂತರ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹ ಉಂಟಾಗಿ ಎರಡು ತಿಂಗಳ ಮೇಲೆ ಕಳೆದರೂ ಪರಿಹಾರ ಸಿಗದೆ ಪರದಾಡುತ್ತಿರುವ ಸಂತ್ರಸ್ತರು, ಸರ್ವೇ ಅಧಿಕಾರಿಗಳಿಂದ ಪ್ರವಾಹಕ್ಕೆ ತುತ್ತಾದ ನಿಜವಾದ ಫಲಾನುಭವಿಗಳನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಬಿಸಿ ವರ್ಗದ ಸರ್ವೇ ಕಾರ್ಯದಲ್ಲೂ ತಾರತಮ್ಯವಾಗಿ ವರದಿ ತಾಲೂಕು ಆಡಳಿತ ಕೈ ಸೇರಿದ ಬಳಿಕವೂ ತಾಲೂಕು ಆಡಳಿತ ತಮಗೆ ಸೂಚಿಸಿದಂತೆ, ಭಾಗಶಃ ಹಾನಿ ಸಂಭವಿಸಿದ ಮನೆಗಳಿಗೆ ಪರಿಹಾರ ನೀಡಿ, ಸಂಪೂರ್ಣ ಬಿದ್ದ ಮನೆಗಳಿಗೆ ಪರಿಹಾರವೇ ಕೊಟ್ಟಿಲ್ಲ ಎಂದು ಸಂತ್ರಸ್ತರು ಅಧಿಕಾರಿಗಳ ವಿರುದ್ಧ ದೂರಿದ್ದಾರೆ.
ಸ್ಥಳಕ್ಕೆ ಅಥಣಿ ತಹಶೀಲ್ದಾರ್ ತಾಲೂಕು ಪಂಚಾಯಿತಿ ಅಧಿಕಾರಿ ರವಿ ಬಂಗಾರೇಪ್ಪ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ, ಎಂದು ನೆರೆ ಸಂತ್ರಸ್ಥರು ಪಟ್ಟು ಹಿಡಿದಿದ್ದಾರೆ.