ಬೆಳಗಾವಿ: ನನ್ನ ಮೌನವೂ ವೀಕ್ನೆಸ್ ಅಲ್ಲ ಎನ್ನುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಬಂಡಾಯದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಮೊನ್ನೆಯಷ್ಟೇ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಿದ್ದ ವೇಳೆ ನನ್ನ ಮೌನ ನನ್ನ ವೀಕ್ನೆಸ್ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಚಾರದ ಬಗ್ಗೆ ಇಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಉತ್ತರಿಸಿದರು.
ಜಿಲ್ಲಾ ಕಾಂಗ್ರೆಸ್ನಲ್ಲಿ ಯಾವುದೇ ಒಂದು ಸಣ್ಣ ಸಮಸ್ಯೆ ಕೂಡ ಇಲ್ಲ. ಬಹಳಷ್ಟು ಹೊಂದಾಣಿಕೆಯಿಂದ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ನನ್ನ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಸಮಸ್ಯೆ ಇಲ್ಲ. 135 ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಮೈಸೂರಿಗೆ ಹೋಗಲು ಸತೀಶ್ ಜಾರಕಿಹೊಳಿ ಅವರು ನನ್ನನ್ನು ಕರೆದಿದ್ದರು. ನನ್ನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು ಮೈಸೂರು ಹೋಗಲು ಪ್ಲಾನ್ ಮಾಡಲಾಗಿತ್ತು. ಆದರೆ, ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ಹಿನ್ನೆಲೆಯಲ್ಲಿ ನಾನು ಹೋಗಲು ಆಗಲಿಲ್ಲ. ಇದರಲ್ಲಿ ಏನೂ ವಿಶೇಷತೆ ಇಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಶಾಸಕರ ಪ್ರವಾಸಕ್ಕೆ ಹೈಕಮಾಂಡ್ ಯಾಕೆ ತಡೆಯಿತು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಈ ಬಗ್ಗೆ ಸತೀಶ್ ಜಾರಕಿಹೊಳಿ ಅವರನ್ನೇ ಕೇಳಿ. ಜಿಲ್ಲೆಯ ಎಲ್ಲಾ ಶಾಸಕರು ಮೈಸೂರಿಗೆ ಹೋಗಬೇಕೆಂದು ಮಾತಾಡಿಕೊಂಡಿದ್ದೆವು. ಇದರಲ್ಲಿ ಯಾವುದೇ ರೀತಿ ಬಂಡಾಯ ಇರಲಿಲ್ಲ. ಮುಂದಿನ ಎಪಿಸೋಡ್ ಸತೀಶ್ ಅವರನ್ನೇ ಕೇಳಿ ಎಂದು ಕುಟುಕಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಭೇಟಿಗೆ ಶಾಸಕರು, ಜಿಲ್ಲಾಧ್ಯಕ್ಷರು ಬಾರದಿರುವ ವಿಚಾರಕ್ಕೆ, ಅಧ್ಯಕ್ಷರ ಪ್ರವಾಸದಲ್ಲಿ ಮೊದಲು ಗೊಂದಲ ಇತ್ತು. ಆದರೂ ಯಾರಾದರೂ ಬಂದು ಸ್ವಾಗತಿಸಿ, ಗೌರವ ಸೂಚಿಸುವ ಕೆಲಸ ಮಾಡಬೇಕಿತ್ತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆಯೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸತೀಶಣ್ಣ ಬಹಳ ಅನುಭವ ಇರುವವರು, ನಾವೆಲ್ಲಾ ಅವರ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾನು ಜಿಲ್ಲೆಗೆ ಯಾವುದೇ ಅಧಿಕಾರಿಯನ್ನು ಹಾಕಿದಾಗ ಅವರು ಯೆಸ್ ಎನ್ನುತ್ತಾರೆ. ಅವರು ಹಾಕಿದಾಗ ನಾನು ಎಸ್ ಎನ್ನುತ್ತೇನೆ. ಇದು ನಮ್ಮಿಬ್ಬರ ನಡುವಿನ ಕಾಂಪ್ರಮೈಸ್ ಅಷ್ಟೆ ಎಂದು ಹೇಳಿದ್ದರು.
ಇದನ್ನೂ ಓದಿ : ನನ್ನ ಹಾಗು ಸತೀಶಣ್ಣನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್