ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ಅನೇಕ ಘಟನೆಗಳು ನಡೆಯುತ್ತಿವೆ. ಈ ಮಧ್ಯೆ ಭಾವೈಕ್ಯತೆಯ ಸಂದೇಶ ಸಾರುವ ಅಪರೂಪದ ಘಟನೆಗಳು ಸಹ ಆಗಾಗ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎಂಬತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್, ಮುಸ್ಲಿಂ ಧರ್ಮದವರಾಗಿದ್ದರೂ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಧರ್ಮದ ಸಂಕೋಲೆಯನ್ನು ಬಿಟ್ಟು ಹಣೆಗೆ ತಿಲಕ ಇಟ್ಟು, ತಲೆಗೆ ಕೇಸರಿ ಟೋಪಿ, ಕೊರಳಿಗೆ ಕೇಸರಿ ಶಾಲು ಹಾಕಿ ಠಾಣೆಯ ಸಿಬ್ಬಂದಿಯೊಂದಿಗೆ ಗಣೇಶ ಹಬ್ಬ ಆಚರಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಇದೂವರೆಗೂ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶನನ್ನ ಪ್ರತಿಷ್ಠಾಪನೆ ಮಾಡುವ ವಾಡಿಕೆ ಇರಲಿಲ್ಲ. ಆದರೆ, ಮುಸ್ಲಿಂ ಧರ್ಮದ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ಅವರು ಹೊಸದಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿದೆ. ಇನ್ಸ್ಪೆಕ್ಟರ್ ಅವರ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಕಳೆಗಟ್ಟಿದ ಗಣೇಶ ಚತುರ್ಥಿ: ಗಣಪನ ಜೊತೆ ಗಮನ ಸೆಳೆದ ಪುನೀತ್ ರಾಜ್ಕುಮಾರ್ ಮೂರ್ತಿ