ಬೆಳಗಾವಿ : ಖ್ಯಾತ ಸಂಗೀತ ನಿರ್ದೇಶಕ ಕೆ ಕಲ್ಯಾಣ್ ಸ್ವಾತಂತ್ರ್ಯ ಯೋಧರೊಬ್ಬರಿಗೆ ಹಾಲಿನಲ್ಲಿ ಪಾದ ಪೂಜೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವದ ದಿನ ಆಚರಿಸಿದರು.
ಬೆಳಗಾವಿ ತಾಲೂಕಿನ ಚೆನ್ನಮ್ಮ ನಗರದಲ್ಲಿರುವ ಸ್ವಾತಂತ್ರ್ಯ ಯೋಧ ಶತಾಯುಷಿ ರಾಜೇಂದ್ರ ಕಲಘಟಗಿ (100) ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಬಳಿಕ ಕೆ.ಕಲ್ಯಾಣ್ ರಾಜೇಂದ್ರ ಅವರ ಪಾದಗಳನ್ನು ಹಾಲಿನಲ್ಲಿ ತೊಳೆದು ಪೂಜೆ ಸಲ್ಲಿಸಿ ನಮಸ್ಕರಿಸಿದರು.
ಪಾದ ಪೂಜೆ ಸ್ವೀಕರಿಸಿದ ಬಳಿಕ ಮಾತನಾಡಿದ ಶತಾಯುಷಿ ರಾಜೇಂದ್ರ ಕಲಘಟಗಿ ಅವರು, ಮೊದಲ ಬಾರಿಗೆ ಇಂತಹ ಸತ್ಕಾರವನ್ನು ನೋಡುತ್ತಿದ್ದೇನೆ. ಬೆಂಗಳೂರಿನಿಂದ ಬಂದು ನನಗೆ ಗೌರವ ನೀಡಿರುವುದು ಕಲ್ಯಾಣ್ ಅವರ ದೊಡ್ಡಗುಣ, ಅವರಿಗೆ ಧನ್ಯವಾದಗಳು ಎಂದ್ರು.
''ನನಗೆ ಈಗ 100 ವರ್ಷ ಪೂರೈಸಿ ಒಂಬತ್ತು ತಿಂಗಳು ಕಳೆದಿವೆ. ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತೇನೆ. ತಪ್ಪದೇ ಯೋಗ, ಸಾವಿರ ಕಪಾಲಬಾತಿ, ಅನುಲೋಮ-ವಿಲೋಮ. ನಂತರ ಹಾಲು-ಬಿಸ್ಕತ್ ಸೇವಿಸಿ ಮನೆ ಸಮೀಪದ ಉದ್ಯಾನದಲ್ಲಿ ಲಘು ವಾಕಿಂಗ್ ಮಾಡ್ತೇನೆ'' ಎಂದು ಲವಲವಿಕೆಯಿಂದ ವಿವರಿಸಿದರು.

ನನಗೆ ಅಸ್ತಮಾ, ಶುಗರ್ ಇದ್ರೂ ಏನೂ ಸಮಸ್ಯೆಯಿಲ್ಲ. ಯೋಗ-ವ್ಯಾಯಾಮ ಮಾಡುವುದರಿಂದ ಯಾವುದೇ ಆರೋಗ್ಯ ಸಮಸ್ಯೆಯಿಲ್ಲ.1942ರಲ್ಲಿ ಮಹಾತ್ಮಾ ಗಾಂಧೀಜಿ ಅವರು ಚಲೇಜಾವ್ ಚಳವಳಿಗೆ ಕರೆ ನೀಡಿದರು. ಆಗ ನನಗೆ ಕೇವಲ 22 ವಯಸ್ಸು.
ಸ್ನೇಹಿತರ ಜತೆಗೂಡಿ ಅಂಚೆ ಡಬ್ಬಿ ಸುಡುವುದು, ರೈಲು ಕಂಬಿ ಕೀಳುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದೇವೆ. ಮುಂಬೈನಿಂದ ಬರುತ್ತಿದ್ದ ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವಾಗ ಪೊಲೀಸರು ಬಂಧಿಸಿದರು. ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದೊಯ್ದರು. ನಂತರ ಏಳು ತಿಂಗಳು ಜೈಲು ಶಿಕ್ಷೆಯಾಯಿತು ಎಂದು ಸ್ವಾತಂತ್ರ್ಯ ಹೋರಾಟದ ದಿನಗಳನ್ನು ಮೆಲುಕು ಹಾಕಿದರು.


ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಕಲ್ಯಾಣ್, ದೇಶದ ಗಡಿ ಕಾಯುವ ಯೋಧರು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬಲಿಕೊಟ್ಟು ದೇಶದ ರಕ್ಷಣೆ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರಿಗೆ ಪಾದ ಪೂಜೆ ಮಾಡಿದ್ರೆ ಭಾರತಾಂಬೆ ಧನ್ಯಳಾಗುತ್ತಾಳೆ.
ಅಂತಹ ಮಹಾಸೌಭಾಗ್ಯ ನಮಗೆ ದೊರಕಿದೆ. ಗಡಿಯಲ್ಲಿ ಇರುವವರ ಸೇವೆ ಮಾಡಿದ್ರೆ ಗುಡಿಯಲ್ಲಿ ಇರುವ ದೇವರು ಓಡಿ ಬಂದು ನಮಗೆ ಸಹಾಯ ಮಾಡುತ್ತಾನೆ. ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಕಣ್ಮುಂದೆ ಕಾಣುವ ದೇವರುಗಳು. ನಮ್ಮ ಮಧ್ಯೆ ಇರುವುದು ನಮ್ಮೆಲ್ಲರ ಸೌಭಾಗ್ಯ. ಹೀಗಾಗಿ, ನಾವೆಲ್ಲರೂ ದೇಹ ಪ್ರೇಮಿಗಳಾಗದೇ ದೇಶ ಪ್ರೇಮಿಗಳಾಗೋಣ ಎಂದರು.
