ಬೆಳಗಾವಿ: ಆಗಸ್ಟ್ 27ರ ರಾತ್ರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕಾಕತಿ ಗ್ರಾಮದಲ್ಲಿನ ಸರ್ವೀಸ್ ರಸ್ತೆಯಲ್ಲಿ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ವ್ಯಕ್ತಿಯೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಲ್ಲಿ ತನ್ನದಲ್ಲದ ತಪ್ಪಿಗೆ ಹೆಣವಾದವನ ಹೆಸರು 32 ವರ್ಷದ ಸಲಾವುದ್ದೀನ್ ಪಕಾಲಿ.
ಸ್ಕ್ರ್ಯಾಪ್ ವ್ಯವಹಾರ ಮಾಡಿಕೊಂಡು ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಜೀವನ ಮಾಡಿಕೊಂಡಿದ್ದ ಆತ ಸಾಲ ಸೋಲ ಮಾಡಿ ಚಿಕ್ಕದೊಂದು ಮನೆಯನ್ನೂ ಕಟ್ಟಿಕೊಂಡಿದ್ದ. ತನ್ನ ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಿದ್ದ. ಆದರೆ ರಾತ್ರಿ ಹಾಲು ತರುತ್ತೇನೆ ಅಂತಾ ಹೋದ ಆತ ಬಂದಿದ್ದು ಮಾತ್ರ ಹೆಣವಾಗಿ. ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಕೊಲೆಯಾದ ವ್ಯಕ್ತಿಯ ಇಡೀ ಕುಟುಂಬ ಇದೀಗ ಬೀದಿಗೆ ಬಂದಿದೆ. ಮನೆಯ ಒಡೆಯನನ್ನು ಕಳೆದುಕೊಂಡು ಕುಟುಂಬ ಸದಸ್ಯರು ಕಣ್ಣೀರಿಡುತ್ತಿದ್ದಾರೆ.
ಘಟನೆಯ ವಿವರ:
ಸಲಾವುದ್ದೀನ್ ಪಕಾಲಿ ಆಗಸ್ಟ್ 27ರ ರಾತ್ರಿ 10.30ರ ಸುಮಾರಿಗೆ ಹಾಲು ತರಲೆಂದು ಮನೆಯಿಂದ ಹೊರ ಹೋಗಿದ್ದಾನೆ. ಈ ವೇಳೆ ತನ್ನ ಮನೆ ಇರುವ ಬಡಾವಣೆಯ ಯುವಕರು ಬೇರೆ ಯುವಕರ ಜತೆ ಜಗಳವಾಡುತ್ತಿದ್ದನ್ನ ಕಂಡಿದ್ದಾನೆ. ತಕ್ಷಣ ಜಗಳ ಬಿಡಿಸಲು ಹೋಗಿದ್ದಾನೆ. ಆಗ ಗಲಾಟೆ ವಿಕೋಪಕ್ಕೆ ತಿರುಗಿದಾಗ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಓರ್ವ ಚಾಕುವಿನಿಂದ ಸಲಾವುದ್ದೀನ್‌ಗೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಸಲಾವುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಮೊಹರಂ ಮೆರವಣಿಗೆ ಮುಗಿಸಿ ಮನೆಗೆ ತೆರಳುವಾಗ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ನಾವು ಜಗಳ ಬಿಡಿಸಲು ಹೋದಾಗ ಯುವಕರ ಗುಂಪು ನಮ್ಮ ಮೇಲೆ ಹಲ್ಲೆ ನಡೆಸಿತು. ಆಗ ಸ್ಥಳಕ್ಕೆ ಆಗಮಿಸಿದ ಸಲಾವುದ್ದೀನ್ ನಮ್ಮ ರಕ್ಷಣೆಗೆಂದು ಬಂದಿದ್ದ. ಗಲಾಟೆಯಾಗಿ ಕುಡಿದ ಮತ್ತಿನಲ್ಲಿದ್ದ ಯುವಕರು ಸಲಾವುದ್ದೀನ್‌ಗೆ ಚಾಕುವಿನಿಂದ ಇರಿದು, ಹತ್ಯೆಗೈದು ಪರಾರಿಯಾದರು. ನಾನು ಮನೆಗೆ ಬಂದು ವಿಷಯ ತಿಳಿಸಿದೆ ಎಂದು ಘಟನೆಯ ಕುರಿತು ಪ್ರತ್ಯಕ್ಷದರ್ಶಿ ತನ್ವೀರ್ ಹೆಳಿದ್ದಾರೆ.
ಆರೋಪಿಗಳ ಬಂಧನ:
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕಾಕತಿ ಪೊಲೀಸರು ನಶೆಯ ಗುಂಗಿನಲ್ಲಿ ಕೊಲೆ ಮಾಡಿದ್ದ ಕಾಕತಿ ಗ್ರಾಮದ ನಾಲ್ಕು ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಾದ ಕಾಕತಿಯ ಅಮರ್ ಶಾಮ್ ಮೇತ್ರಿ, ಅಖಿಲ್ ಮೇತ್ರಿ, ಸುನಿಲ್ ಬಾಳಪ್ಪಗೋಳ, ಪರಶರಾಮ ಈರಗಾರ ಎಂಬ ನಾಲ್ವರನ್ನು ಬಂಧಿಸಿ ಹಿಂಡಲಗ ಜೈಲಿಗೆ ಕಳುಹಿಸಿ, ತನಿಖೆ ಮುಂದುವರೆಸಿದ್ದಾರೆ.
ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಮೃತನ ಪತ್ನಿ ದಿವ್ಯಾಂಗೆಯಾಗಿದ್ದು, ಮೂವರು ಮಕ್ಕಳನ್ನು ಹೇಗೆ ಸಾಕಲಿ? ಮಕ್ಕಳು ಅಪ್ಪ ಎಲ್ಲಿ ಎಂದು ಕೇಳುತ್ತಾರೆ ಅಂತಾ ಕಣ್ಣೀರಿಡುತ್ತಿದ್ದಾಳೆ.
ಮಗ ಯಾರ ತಂಟೆಗೂ ಹೋಗದೇ ಸಾಲ ಮಾಡಿ ಮನೆ ಕಟ್ಟಿದ್ದು, ಮನೆ ಕೂಡ ಅರ್ಧ ಆಗಿದೆ. ಈಗ ನಮಗೆ ಯಾರು ದಿಕ್ಕು? ಮೂರು ಮಕ್ಕಳು ಅನಾಥವಾಗಿವೆ. ಆ ಮಕ್ಕಳಿಗೆ ಎನಾದರೂ ಸಹಾಯ ಮಾಡಿ. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಮೃತನ ತಾಯಿ ಒತ್ತಾಯಿಸುತ್ತಿದ್ದಾರೆ.
ಘಟನೆ ನಡೆದ ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆ ಇದ್ದರೂ ಇಂತಹ ಅವಘಡ ಸಂಭವಿಸಿದೆ. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.