ಚಿಕ್ಕೋಡಿ: ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾರೂ ವಿರೋಧ ಮಾಡಿಲ್ಲ, ಅದು ಭಾಷಾವಾರು ಅಲ್ಲ. ಮರಾಠ ಸಮಾಜದಲ್ಲಿ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆ ಮಾತನಾಡುವವರಿದ್ದಾರೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಜೊಲ್ಲೆ ಕ್ಯಾಂಪಸ್‌ನಲ್ಲಿ ಜಿಲ್ಲಾಡಳಿತ, ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉಚಿತವಾಗಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳ ವಿತರಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಆರ್ಥಿಕ ಮತ್ತು ಸಾಮಾಜಿಕವಾಗಿ ಅನುಕೂಲವಾಗಲು ಪ್ರಾಧಿಕಾರ ರಚನೆ ಮಾಡಿದ್ದು, ಇದನ್ನ ಬಹಳಷ್ಟು ಜನ ಅಪಪ್ರಚಾರ ಮಾಡಿದ್ದಾರೆ. ವೀರಶೈವ ಲಿಂಗಾಯತ ಪ್ರಾಧಿಕಾರಕ್ಕೆ ಸಮಾಜದ ಎಲ್ಲಾ ಮುಖಂಡರು ಬೇಡಿಕೆ ಇಟ್ಟಿದ್ದರು. ಡಿಸಿಎಂ ಲಕ್ಷ್ಮಣ ಸವದಿ, ಬಿ.ಸಿ.ಪಾಟೀಲ್, ಸೊಮ್ಮಣ್ಣ ಸೇರಿದಂತೆ ಎಲ್ಲಾ ಮುಖಂಡರು ಸಿಎಂ ಭೇಟಿ ಮಾಡಿದ್ದರು. ಇಂದು ವೀರಶೈವ ಲಿಂಗಾಯತ ಪ್ರಾಧಿಕಾರ ರಚನೆ ಮಾಡಿದ್ದಾರೆ. ಎರಡು ಪ್ರಾಧಿಕಾರಗಳ ರಚನೆ ಹಿನ್ನೆಲೆ ಇಂದು ಡಬಲ್ ಧಮಾಕ ಅಂತ ಹೇಳಬಹುದು ಎಂದರು.