ಬೆಳಗಾವಿ/ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ಒಂದೊಂದೇ ಅಸ್ತ್ರಗಳ ಪ್ರಯೋಗ ಆರಂಭಿಸುತ್ತಿರುವ ಬಿಜೆಪಿ ಇದೀಗ ಹಲಾಲ್ ಪ್ರಮಾಣಪತ್ರದ ವಿರುದ್ಧ ದನಿ ಎತ್ತಿದ್ದು ಕಾನೂನು ಮೂಲಕ ನಿಯಂತ್ರಣ ಹೇರುವ ಪ್ರಯತ್ನಕ್ಕೆ ಚಾಲನೆ ನೀಡುತ್ತಿದೆ. ತನ್ನ ಸದಸ್ಯರ ಮೂಲಕ ಖಾಸಗಿ ವಿಧೇಯಕ ಮಂಡನೆಗೆ ಮುಂದಾಗಿದ್ದು, ಅದರಂತೆ ಪರಿಷತ್ ಸದಸ್ಯ ಎನ್.ರವಿಕುಮಾರ್ ಹಲಾಲ್ ಪ್ರಮಾಣ ಪತ್ರದ ಮಾನ್ಯತೆ ಪ್ರಶ್ನಿಸಿ ವಿಧಾನ ಪರಿಷತ್ನಲ್ಲಿ ಖಾಸಗಿ ವಿಧೇಯಕ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಸರ್ಕಾರದಿಂದಲೇ ಇದಕ್ಕೆ ಅಡ್ಡಿಪಡಿಸಲಾಗುತ್ತಿದೆಯಾ ಎನ್ನುವ ಅನುಮಾನ ಮೂಡುತ್ತಿದೆ.
ರಾಜ್ಯದಲ್ಲಿ ಹಲವು ಉತ್ಪನ್ನಗಳ ಮೇಲೆ ಹಲಾಲ್ ಮುದ್ರೆ ಕಾಣ ಸಿಗುತ್ತದೆ. ಇದರ ವಿರುದ್ಧ ಬಿಜೆಪಿ ತಿರುಗಿಬಿದ್ದಿದ್ದು, ಬೀದಿಯಲ್ಲಿ ಮಾಡುತ್ತಿದ್ದ ಹೋರಾಟವನ್ನು ಇದೀಗ ಸದನಕ್ಕೆ ಕೊಂಡೊಯ್ಯಲು ಸಿದ್ದತೆ ನಡೆಸಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದಲ್ಲಿ ಖಾಸಗಿ ವಿಧೇಯಕ ಮಂಡನೆ ಮಾಡಲು ನಿರ್ಧರಿಸಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪರಿಷತ್ ಸದಸ್ಯ ಎನ್.ರವಿಕುಮಾರ್ ಖಾಸಗಿ ವಿಧೇಯಕ ಸಿದ್ದಪಡಿಸಿಕೊಂಡಿದ್ದು, ಸಭಾಪತಿಗಳ ಅನುಮತಿಗೆ ಕಾಯುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ರವಿಕುಮಾರ್, ಎಫ್ಎಸ್ಎಸ್ಎಐ ಹೊರತುಪಡಿಸಿ ಬೇರೆ ಯಾರೂ ಅಧಿಕೃತವಾಗಿ ಖಾದ್ಯ, ಔಷಧಿ ಸೇರಿ ಈ ವ್ಯಾಪ್ತಿಯ ಉತ್ಪನ್ನಗಳಿಗೆ ಪ್ರಮಾಣ ಪತ್ರವನ್ನೂ ನೀಡುವಂತಿಲ್ಲ. ಆದರೂ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಹಲಾಲ್ ಪ್ರಮಾಣಪತ್ರ ನೀಡಲಾಗುತ್ತಿದೆ. ಹಲಾಲ್ ಮುದ್ರೆ ಹಾಕುವ ಪದ್ದತಿ ಕೇವಲ ಮಾಂಸಹಾರಕ್ಕೆ ಮಾತ್ರ ಸೀಮಿತವಾಗಿಲ್ಲ.
ಆಸ್ಪತ್ರೆ, ಅನೇಕ ಖಾದ್ಯಗಳು, ಕಿರಾಣಿ ಅಂಗಡಿ ಉತ್ಪನ್ನ ಸೇರಿದಂತೆ ಹತ್ತು ಹಲವು ಉತ್ಪನ್ನ ಹಾಗೂ ಇತರ ಕಡೆಗಳಲ್ಲೂ ಹಲಾಲ್ ಮುದ್ರೆ ಇದೆ. ಪ್ರಮಾಣಪತ್ರ ಕೊಡಲು ಇವರು ಯಾರು? ಇವರಿಗೆ ಅಧಿಕಾರ ನೀಡಿದವರು ಯಾರು? ಕಾನೂನು ಬಾಹಿರವಾಗಿ ಪ್ರಮಾಣಪತ್ರ ನೀಡಲಾಗುತ್ತಿದೆ.
ಖಾದ್ಯ ಉತ್ಪನ್ನಗಳಿಗೆ ಹಲಾಲ್ ಸಂಸ್ಥೆಯೇ ಪ್ರಮಾಣಪತ್ರ ನೀಡುವುದಾದರೆ ಆಹಾರ ಇಲಾಖೆ ಯಾಕೆ ಬೇಕು? ಔಷಧ ಉತ್ಪನ್ನಗಳಿಗೆ ಹಲಾಲ್ ಸಂಸ್ಥೆಯೇ ಪ್ರಮಾಣಪತ್ರ ನೀಡುವುದಾದರೆ ಆರೋಗ್ಯ ಇಲಾಖೆ ಯಾಕೆ ಬೇಕು? ಈ ರೀತಿಯಾಗಿ ಕಾನೂನು ಬಾಹಿರವಾಗಿ ಹಲಾಲ್ ಪ್ರಮಾಣಪತ್ರ ನೀಡುವುದನ್ನು ತಡೆಯಲು ನಾನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ವಿರುದ್ಧ ಖಾಸಗಿ ಬಿಲ್ ಮಂಡನೆ ಮಾಡುತ್ತೇನೆ ಎಂದರು.
ಹಲಾಲ್ ಮುದ್ರೆ ಹಾಕುವುದು ಅಪರಾಧ: ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು ಎಂದು ನೋಂದಣಿ ಆಗಿವೆ. ಧಾರ್ಮಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರ ಕಾನೂನು ರೀತಿ ಇಲ್ಲ. ಅಲ್ಲದೇ ಈ ಧಾರ್ಮಿಕ ಸಂಸ್ಥೆಗಳು ಪ್ರಮಾಣಪತ್ರ ನೀಡುವ ಕುರಿತು ಸರ್ಕಾರದಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲ.
ಸರ್ಕಾರ ಯಾವುದೇ ಖಾಸಗಿ ಅಥವಾ ಧಾರ್ಮಿಕ ಅಥವಾ ಯಾವುದೇ ವ್ಯಕ್ತಿಗಳಿಗೆ ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ಕೊಟ್ಟೂ ಇಲ್ಲ, ರಾಜ್ಯದಲ್ಲಿ ಕೇವಲ ವಸ್ತುಗಳಿಗೆ ಎಫ್ಎಸ್ಎಸ್ಎಐ ಮಾತ್ರ ಪ್ರಮಾಣಪತ್ರ ನೀಡಬೇಕು. ಆದರೆ, ಇಲ್ಲಿ ಸ್ಪಷ್ಟವಾಗಿ ಕಾನೂನು ಬಾಹಿರವಾಗಿ ಹಲಾಲ್ ಪ್ರಮಾಣಪತ್ರ ನೀಡಲಾಗುತ್ತಿದೆ. ಕಾನೂನು ರೀತಿ ಇದು ಅಪರಾಧ. ಹಾಗಾಗಿ ಖಾಸಗಿ ಬಿಲ್ ತರಲು ನಿರ್ಧರಿಸಿದೆ ಎಂದರು.
ಸಾವಿರಾರು ಕೋಟಿ ರೂ. ನಷ್ಟ: ಖಾದ್ಯ ಉತ್ಪನ್ನಗಳು, ಆಸ್ಪತ್ರೆ ಪರಿಕರಗಳು, ಔಷಧಿಗಳು, ಕಿರಾಣಿ ಅಂಗಡಿ ಪದಾರ್ಥಗಳ ಮೇಲೆ ಹಲಾಲ್ ಪ್ರಮಾಣಪತ್ರ ನೀಡಲಾಗುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 5 ಸಾವಿರ ಕೋಟಿ ನಷ್ಟವಾಗುತ್ತಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಬೇಕು. ಈ ರೀತಿಯಾಗಿ ಸರ್ಕಾರಕ್ಕೆ ಬರಬೇಕಾದ ಹಣ ಮತ್ತಿನ್ಯಾರದ್ದೋ ಪಾಲಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಈಗಾಗಲೇ ನಾನು ಅನೇಕ ಕಾನೂನು ತಜ್ಞರ ಜೊತೆ ಸಮಾಲೋಚನೆ ಮಾಡಿದ್ದೇನೆ.
ಅಭಿಪ್ರಾಯವನ್ನೂ ಪಡೆದುಕೊಂಡಿದ್ದೇನೆ. ನಮ್ಮ ಶಾಸಕರ ಜೊತೆಗೂ ಸಹ ಚರ್ಚೆ ಮಾಡಿದ್ದೇನೆ. ಎಲ್ಲ ರೀತಿಯಲ್ಲಿಯೂ ಯೋಚಿಸಿದ ನಂತರವೇ ಹಲಾಲ್ ಸರ್ಟಿಫಿಕೇಟ್ ನೀಡುವ ಸಂಸ್ಥೆ ಕಾನೂನು ವಿರೋಧಿ ಎನ್ನುವ ನಿರ್ಧಾರಕ್ಕೆ ಬಂದು ಖಾಸಗಿ ಬಿಲ್ ಮಂಡಿಸುತ್ತಿದ್ದೇನೆ ಎಂದರು.
ಸಭಾಪತಿಗೆ ಪತ್ರ: ಹಲಾಲ್ ಪ್ರಮಾಣಪತ್ರ ನೀಡುತ್ತಿರುವುದರ ವಿರುದ್ಧ ಖಾಸಗಿ ಬಿಲ್ ಮಂಡಿಸಲು ಅನುಮತಿ ಕೋರಿ ಹಿಂದಿನ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರಿಗೆ ಪತ್ರ ಬರೆದಿದ್ದೆ. ಪತ್ರ ಸಭಾಪತಿ ಕಚೇರಿಯಲ್ಲಿದೆ ಈಗ ಸಭಾಪತಿಗಳು ಬದಲಾಗಿದ್ದು, ಬಸವರಾಜ ಹೊರಟ್ಟಿ ಸಭಾಪತಿಯಾಗಿದ್ದಾರೆ. ಈ ಅಧಿವೇಶನದಲ್ಲಿಯೇ ನನಗೆ ಖಾಸಗಿ ವಿಧೇಯಕ ಮಂಡನೆಗೆ ಅನುಮತಿ ಸಿಗುವ ವಿಶ್ವಾಸವಿದೆ. ಸಭಾಪತಿಗಳು ಅನುಮತಿ ನೀಡುತ್ತಿದ್ದಂತೆ ಖಾಸಗಿ ಬಿಲ್ ಮಂಡಿಸುತ್ತೇನೆ ಎಂದರು.
ಸರ್ಕಾರದಿಂದ ವಿಳಂಬ: ಆದರೆ ಖಾಸಗಿ ಬಿಲ್ ಮಂಡನೆಯನ್ನು ಮುಂದೂಡಿಕೆ ಮಾಡಲು ಸರ್ಕಾರದ ಮುಖ್ಯ ಸಚೇತಕ ಡಾ.ವೈಎ.ನಾರಾಯಣಸ್ವಾಮಿ ಮುಂದಾಗಿದ್ದಾರೆ. ಹಲಾಲ್ ಸರ್ಟಿಫಿಕೇಟ್ ನೀಡುತ್ತಿರುವುದರ ವಿರುದ್ಧ ಸರ್ಕಾರಿ ಬಿಲ್ ತರಲು ಚಿಂತನೆ ನಡೆಸಿದ್ದ ಸರ್ಕಾರ ನಂತರ ಖಾಸಗಿ ಬಿಲ್ ಮೂಲಕ ಪರಿಸ್ಥಿತಿ ಅವಲೋಕಿಸಲು ನಿರ್ಧರಿಸಿತ್ತು. ಅದರಂತೆ ರವಿಕುಮಾರ್ ಬಿಲ್ ಮಂಡಿಸಲು ಮುಂದಾಗಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಚೀಫ್ ವಿಪ್ ನಾರಾಯಣ್ವಾಮಿ ಖಾಸಗಿ ವಿಲ್ ವಿಳಂಬ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಹಲಾಲ್ ಬಿಲ್ ಕುರಿತ ಕಾನೂನು ತೊಡಕುಗಳ ಕುರಿತು ಮತ್ತೊಮ್ಮೆ ಅವಲೋಕನೆ ಅಗತ್ಯವಿದೆ ಎಂದು ಪರೋಕ್ಷವಾಗಿ ಖಾಸಗಿ ಬಿಲ್ ಮಂಡನೆಯನ್ನು ಮುಂದೂಡುವ ಚಿಂತನೆ ನಡೆಸಿದ್ದಾರೆ. ಆದರೆ, ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.. ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ಎಚ್ಚರ.. ಸರ್ಕಾರದಿಂದ ಮಾರ್ಗಸೂಚಿ