ಅಥಣಿ: ಜಾತಿ-ಧರ್ಮದ ನಡುವೆ ದ್ವೇಷ ಹುಟ್ಟುಹಾಕುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಚಿಕ್ಕೋಡಿ ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ವಾಗ್ದಾಳಿ ನಡೆಸಿದ್ದಾರೆ. ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ನಡವಳಿಕೆ ತಾಲಿಬಾನಿಗಳ ತರ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ದೇಶದಲ್ಲಿ ಹಿಂದೂಗಳ ಪರವಾಗಿ ಇರುವ ಪಕ್ಷ ಅಂದರೆ ಅದು ಭಾರತೀಯ ಜನತಾ ಪಕ್ಷ. ಭಾರತ ದೇಶ ಅಖಂಡವಾಗಿರುವ ಹಿಂದೂ ದೇಶ. ಇಲ್ಲಿರುವ ಎಲ್ಲಾ ಜನರು ಸೌಹಾರ್ದತೆಯಿಂದ ಬದುಕಬೇಕೆಂಬುದು ಬಿಜೆಪಿಯ ಉದ್ದೇಶ.
ಆದರೆ, ಕಾಂಗ್ರೆಸ್ ಪಕ್ಷ ಮತ ಮತಗಳ ನಡುವೆ ಮತ್ತು ಧರ್ಮ ಧರ್ಮದ ನಡುವೆ ದ್ವೇಷ ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲವೆಂದು" ಖಾರವಾಗಿ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಹೋಗಿ ಅಧಿಕಾರ ಕಳೆದುಕೊಂಡರು. ಭಾರತೀಯ ಜನತಾ ಪಕ್ಷ ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದತೆಯಿಂದ ಹಾಗೂ ವಿಶ್ವಾಸ ಗಳಿಸಿದ ಪಕ್ಷ ಎಂದರು.
ಸಿಂಧಗಿ ಹಾಗೂ ಹಾನಗಲ್ನ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸುತ್ತದೆ. ಕಾಗವಾಡ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಪರ್ವ ಶುರುವಾಗಿದೆ. ಒಂದೇ ದಿನ ಒಂದೇ ಗ್ರಾಮದಲ್ಲಿ 22 ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದು ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಬಣ್ಣಿಸಿದರು.