ಬೆಳಗಾವಿ: ನಿಪ್ಪಾಣಿ ಸಮಾರಂಭದ ಭಾಷಣದಲ್ಲಿ ಹೇಳಿದ ಹಿಂದೂ ಶಬ್ದ, ಪರ್ಷಿಯನ್ ಭಾಗದಿಂದ ಬಂದಿದೆ ಎಂದು ಉಲ್ಲೇಖ ಮಾಡಿದ್ದು ನಿಜ. ನಾನು ಇದರ ಬಗ್ಗೆ ಸಂಪೂರ್ಣವಾಗಿ ಚರ್ಚೆ ಆಗಲಿ ಎಂದು ಹೇಳಿದ್ದೇನೆ. ಹಿಂದೂ ಶಬ್ದದ ಬಗ್ಗೆ ಕೆಲವು ನಿಂದನೆ ಮಾಡುವಂತಹ ಸಾಕಷ್ಟು ಶಬ್ದಗಳು ದಾಖಲೆಗಳಲ್ಲಿ ಸಿಗುತ್ತವೆ. ಅದರ ಬಗ್ಗೆ ನಾನು ಒತ್ತಿ ಹೇಳಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟೀಕರಣ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ಕಾರ್ಯಕ್ರಮದಲ್ಲಿ ಹಿಂದೂ ನಮ್ಮ ಶಬ್ದವೇ ಅಲ್ಲ ಎಂಬ ತಮ್ಮ ಹೇಳಿಕೆಗೆ ಅವರು ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಒಂದು ಶಬ್ದದ ಮೇಲೆ ರಾಷ್ಟ್ರ ಮತ್ತು ರಾಜ್ಯದ ಎಲ್ಲ ಮಾಧ್ಯಮಗಳಲ್ಲಿ ಚರ್ಚೆಗಳು, ಟೀಕೆ ಟಿಪ್ಪಣಿಗಳು ಆಗುತ್ತಿವೆ. ಅದರ ಬಗ್ಗೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ. ನನ್ನ ಭಾಷಣದಲ್ಲಿ ಹಿಂದೂ ಶಬ್ದ ಪರ್ಷಿಯನ್ ಭಾಗದಿಂದ ಬಂದಿದೆ ಎಂದು ಉಲ್ಲೇಖ ಮಾಡಿದ್ದು ನಿಜ ಎಂದಿದ್ದಾರೆ.
ಅಲ್ಲದೆ, ಇದರ ಬಗ್ಗೆ ಸಂಪೂರ್ಣವಾಗಿ ಚರ್ಚೆ ಆಗಲಿ ಎಂದೂ ಸಹ ಹೇಳಿದ್ದೇನೆ. ಇದು ಸತೀಶ ಜಾರಕಿಹೊಳಿ ಹೇಳಿಕೆ ಅಲ್ಲ. ಇದೇ ರೀತಿ ದೇಶದಲ್ಲಿ ಸಾವಿರಾರು ಭಾಷಣಗಳಾಗುತ್ತವೆ. ಆದರೂ ಕೂಡ ಮಾಧ್ಯಮದವರು ನಾನು ಹೇಳಿದ್ದನ್ನು ದೊಡ್ಡ ಮಟ್ಟದಲ್ಲಿ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಯುದ್ಧದ ಮಾದರಿಯಲ್ಲಿ ವಿಶ್ಲೇಷಣೆ: ಹಿಂದೂ, ಪರ್ಷಿಯನ್, ಇಸ್ಲಾಂ, ಜೈನ ಹಾಗೂ ಬೌದ್ಧ ಇರಲಿ ಅದನ್ನು ಮೀರಿ ಬೆಳೆದು ಕೆಲಸವನ್ನು ನಾನು ಮಾಡುತ್ತಿದ್ದೇನೆ. ನಾವು ಯಾವುದೇ ಜಾತಿ, ಧರ್ಮಗಳನ್ನ ಮೀರಿ ಬೆಳೆಯಬೇಕು. ಹೀಗಾಗಿ ನಾನು ಹೇಳಿದರಲ್ಲಿ ಏನೂ ತಪ್ಪಿಲ್ಲ. ಪರ್ಷಿಯನ್ ಶಬ್ದ ಬಂದಿರುವ ಬಗ್ಗೆ ನೂರಾರು ದಾಖಲೆಗಳಿವೆ. ಮಾಧ್ಯಮಗಳು ಇದನ್ನು ಉಕ್ರೇನ್ - ರಷ್ಯಾ ಯುದ್ಧದ ಮಾದರಿಯಲ್ಲಿ, ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಮಾಧ್ಯಮದವರು ನೈಜ ಸುದ್ದಿಯನ್ನು ತೋರಿಸಬೇಕು. ಅನಾವಶ್ಯಕವಾಗಿ ಹಿಂದೂ ಧರ್ಮದ ವಿಷಯ ಬಂದಾಗ ಇಷ್ಟೊಂದು ವೈಭವೀಕರಣ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಹಿಂದೂಗಳು ಕೊಲೆಯಾದಾಗ ಅದಕ್ಕೆ ವಿಶೇಷ ಸ್ಥಾನಮಾನ ಸಿಗುತ್ತದೆ. ದಲಿತರ ಕೊಲೆಯಾದಾಗ ಅದಕ್ಕೆ ಯಾವುದೇ ಸ್ಥಾನಮಾನ ಇರಲ್ಲ. ದಯವಿಟ್ಟು ನಿಜವಾದ ಸುದ್ದಿ ಪ್ರಸಾರ ಮಾಡಬೇಕು. ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣವನ್ನೊಮ್ಮೆ ಕೇಳಿ. ಹಿಂದೂ ಧರ್ಮ ಅಂದರೆ ಅದೊಂದು ನಮ್ಮ ಬಾಳ್ವೆ ಅಂತಾ ಹೇಳಿದ್ದಾರೆ. ಸುಪ್ರೀಂಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಅದನ್ನೇ ಹೇಳಿದೆ.
ಹತ್ತು ಸಲ ನನ್ನ ಭಾಷಣ ಕೇಳಿ: ಹೀಗಾಗಿ ನಾನೇನು ಯಾರಿಗಾದರೂ ಅವಮಾನ ಮಾಡಬೇಕು ಎನ್ನುವುದಿಲ್ಲ. ನನಗೆ ಎಲ್ಲ ಧರ್ಮಗಳು ಅಷ್ಟೇ. ನಾನು ಯಾವುದೇ ಜಾತಿ, ಧರ್ಮಗಳನ್ನು ನಂಬದ ವ್ಯಕ್ತಿ. ಅವುಗಳಿಂದ ದೂರ ಇರುವ ವ್ಯಕ್ತಿಯಾಗಿದ್ದೇನೆ. ಮಾಧ್ಯಮದವರು ನನ್ನ ಮೇಲೆ ದೊಡ್ಡ ಅಪರಾಧ ಮಾಡಿದ್ದೇನೆಂಬಂತೆ ಬಿಂಬಿಸಲು ಹೋಗಬೇಡಿ. ಇನ್ನೂ ಹತ್ತು ಸಲ ನನ್ನ ಭಾಷಣ ಕೇಳಿ. ಮಾಧ್ಯಮದವರು ಮಾಡುತ್ತಿರುವ ಚರ್ಚೆ ಯಾರಿಗೂ ಲಾಭ ಆಗುವುದಿಲ್ಲ. ನಾನು ಮಾತನಾಡಿದ್ದು ತಪ್ಪಿದ್ದರೆ ಚರ್ಚೆ ಮುಂದುವರೆಸಿ, ಇಲ್ಲವಾದರೆ ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಮಾಧ್ಯಮಗಳು ಹಾಗೆಯೇ ಮುಂದುವರೆಸಿದರೆ, ನಿಮ್ಮ ಮೇಲೆ ನಾನು ಮಾನಹಾನಿ ಕೇಸ್ ದಾಖಲಿಸುತ್ತೇನೆ. ಕಾರಣ, ನಾನು ಯಾವುದೇ ಧರ್ಮ, ಭಾಷೆಗೆ ಅವಮಾನ ಮಾಡಿಲ್ಲ. ಪರ್ಷಿಯನ್ ಪದದ ಬಗ್ಗೆ ಹೇಳಿದ್ದೇನೆ. ಅದರ ಬಗ್ಗೆ ಚರ್ಚೆ ಆಗಲಿ ಎಂದಷ್ಟೇ ಹೇಳಿದ್ದೇನೆ. ಇದು ನಾನು ಹೇಳಿದ ಮಾತಲ್ಲ, ವಿಕಿಪೀಡಿಯಾದಲ್ಲಿರುವುದನ್ನು ಹೇಳಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: ಹಿಂದೂ ನಮ್ಮ ಶಬ್ದ ಅಲ್ಲವೇ ಅಲ್ಲ : ಸತೀಶ ಜಾರಕಿಹೊಳಿ