ಬೆಳಗಾವಿ : ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕರು. ದಿನಕ್ಕೆರಡು ಬಾರಿ ಅವರೊಂದಿಗೆ ಮಾತನಾಡುತ್ತೇನೆ ಎನ್ನುವ ಸಚಿವ ರಮೇಶ್ ಜಾರಕಿಹೊಳಿ ಇನ್ನೂ ಬಿಜೆಪಿಯಲ್ಲಿ ಸೆಟ್ಲ್ ಆದಂತಿಲ್ಲ. ಎರಡೂ ದೋಣಿಯಲ್ಲಿ ಕಾಲಿಟ್ಟಿರುವಂತಿದೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ ಅವರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಇಂದಿಗೂ ತಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಜೊತೆ ದಿನಕ್ಕೆರಡು ಬಾರಿ ಮಾತನಾಡುತ್ತೇನೆ ಎಂದಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ ಜಾರಕಿಹೊಳಿ ಇನ್ನೂ ಕಾಂಗ್ರೆಸ್ ಜೊತೆ ಸಂಬಂಧವಿರಿಸಿಕೊಂಡಿದ್ದಾರೆಂದರೆ ಅವರಿಗೆ ಬಿಜೆಪಿಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎನಿಸುತ್ತಿದೆ.
ಮತ್ತೆ ಕಾಂಗ್ರೆಸ್ಗೆ ಮರಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎನ್ನುವ ಮೂಲಕ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೋ? ಎಂದು ಪ್ರಶ್ನಿಸಿದ್ದಾರೆ.
ಸದಸ್ಯರೇ ಅಲ್ಲದವರಿಗೂ ಸನ್ಮಾನ : ಬೆಳಗಾವಿ ಗ್ರಾಮೀಣ ಕ್ಷೇತ್ರದ 22 ಗ್ರಾಪಂ ಸದಸ್ಯರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಸುಳ್ಳು ಹೇಳಿದ್ದಾರೆ. ಅರ್ಧದಷ್ಟು ಗ್ರಾಪಂ ಸದಸ್ಯರು ಕೂಡ ಅವರ ಕಾರ್ಯಕ್ರಮಕ್ಕೆ ಹೋಗಿಲ್ಲ.
ಹಾಕಿದ್ದ ಖುರ್ಚಿಗಳೆಲ್ಲ ಖಾಲಿ ಇದ್ದದ್ದೆ ಇದಕ್ಕೆ ಸಾಕ್ಷಿ. ಕೆಲವರು ಸಚಿವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವಂತಿದೆ. ಸದಸ್ಯರಲ್ಲದವರನ್ನೂ ತಂದು ಕೂರಿಸಿ ಸನ್ಮಾನ ಮಾಡಲಾಗಿದೆ. ಅದಕ್ಕೆ ಇಲ್ಲಿರುವ ಫೋಟೋ ಸಾಕ್ಷಿಎಂದರು.
ರಮೇಶ್ ಜಾರಕಿಹೊಳಿ ಒಬ್ಬ ಸಚಿವರಾಗಿ ಜವಾಬ್ದಾರಿಯುತವಾಗಿ, ಆ ಖುರ್ಚಿಗೆ ಗೌರವ ಕೊಟ್ಟಾದರೂ ಮಾತನಾಡಬೇಕು. ನಾಲಿಗೆಯ ಮೇಲೆ ಅವರಿಗೆ ಹಿಡಿತವಿಲ್ಲ. ನನ್ನನ್ನು ಶಾಸಕಿಯನ್ನಾಗಿ ಮಾಡಿದ್ದು, ಕ್ಷೇತ್ರದ ಜನರೇ ಹೊರತು ಇವರಲ್ಲ.
ಇವರು ಬೆನ್ನಿಗೆ ಚೂರಿ ಹಾಕುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. 2023ರ ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ನೀಡುವ ಮೂಲಕ ಜನರು ಇವರಿಗೆ ಬುದ್ದಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಓದಿ: ಉದ್ಯೋಗ ಖಾತ್ರಿ ಯೋಜನೆಯಡಿ ಬಿಸಿಲಲ್ಲಿ ಕೆಲಸ.. ಮಹಿಳೆಯರ ಸಂಕಷ್ಟ ಆಲಿಸಿದ ಶಾಸಕಿ ಹೆಬ್ಬಾಳ್ಕರ್