ಚಿಕ್ಕೋಡಿ: ಬಿಜೆಪಿ ಪಕ್ಷದವರೇ ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿಯಲ್ಲಿ ಏನ್ ನಡೀತಾ ಇದೆ ಅನ್ನೋದನ್ನ ಅವರೇ ಹೇಳುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಕಾಂಗ್ರೆಸ್ ಸೋಲಿಸುವುದೇ ನನ್ನ ಮುಖ್ಯ ಗುರಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಕಾಗವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಹೇಳಿಕೆ ಬಗ್ಗೆ ಈಗಾಗಲೇ ಪಕ್ಷದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಗಾಗಿ ಆ ಹೇಳಿಕೆ ಬಗ್ಗೆ ನಾನು ಮಾತನಾಡೋದಕ್ಕೆ ಹೋಗೊದಿಲ್ಲ ಎಂದರು.
ದಿನದಿಂದ ದಿನಕ್ಕೆ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ. ಹೀಗಾಗಿ ಚುನಾವಣೆಯನ್ನ ಬೇರೆ ಕಡೆಗೆ ತೆಗೆದುಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅವರು ಹೇಳುತ್ತಿದ್ದಾರೆ ಕಾಂಗ್ರೆಸ್ ಸೋಲಿಸೋದೇ ನನ್ನ ಮುಖ್ಯ ಗುರಿ ಅಂತಾ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದಾರೆ. ಕಾಂಗ್ರೆಸ್ ಪಕ್ಷ ಇನ್ನೂ ಜೀವಂತ ಇದೆ, ಗಟ್ಟಿಯಾಗಿದೆ ಎಂದು ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ಅದಕ್ಕೂ ಹೆಚ್ಚಾಗಿ ಬಿಜೆಪಿ ಪಕ್ಷದವರೇ ನನ್ನ ಸಂಪರ್ಕದಲ್ಲಿದ್ದಾರೆ. ಅಲ್ಲಿ ಏನ ನಡೀತಾ ಇದೆ ಅನ್ನೋದನ್ನ ಹೇಳುತ್ತಿದ್ದಾರೆ. ಅವರ ಮತದಾರರೇ ಅಕ್ಕಾ ನಿಮ್ಮ ಬೆನ್ನಿಗೆ ಇರ್ತೇವಿ ಅಂತಿದ್ದಾರೆ. ಹಾಗಾಗಿ ಆ ದೇವರ ನಮಗೆ ಆಶೀರ್ವಾದ ಮಾಡೇ ಮಾಡುತ್ತಾನೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ಬೆಳಗಾವಿಗೆ ಸಿದ್ದರಾಮಯ್ಯ, ಡಿಕೆಶಿ :
ವಿಧಾನ ಪರಿಷತ್ ಚುನಾವಣೆ ನಿಮಿತ್ತ ಬೆಳಗಾವಿಯ ಜಿಲ್ಲೆಯ ರಾಮದುರ್ಗ ಮತ್ತು ಚಿಕ್ಕೋಡಿ ಉಪವಿಭಾಗದ ರಾಯಬಾಗಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬರುತ್ತಾರೆ. ರಾಮದುರ್ಗದಲ್ಲಿ 11ಕ್ಕೆ, ರಾಯಬಾಗದಲ್ಲಿ 2 ಗಂಟೆಗೆ ಬಹಿರಂಗವಾಗಿ ನಡೆಯುವ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗಮಿಸುತ್ತಿದ್ದಾರೆ. ಇಂದು ಕಾಗವಾಡದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲ ಕಡೆಯೂ ಗ್ರಾಮ ಪಂಚಾಯಿತಿ ಸದಸ್ಯರು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲ ಮತದಾರರು ಕಾಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಬುದ್ಧ ಮತದಾರರು ಇದ್ದಾರೆ. ಒಳ್ಳೆಯ ನಿರ್ಧಾರ ತೆಗದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿ : ಲಖನ್ ಪರ ಬಹಿರಂಗ ಪ್ರಚಾರ.. ಮೊದಲ ಪ್ರಾಶಸ್ತ್ಯದ ಮತದ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿದ್ದಿಷ್ಟೇ..