ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಯ ನೀಡಿರುವುದರಿಂದ ಅಡಕೆ ಬೆಳೆಗಾರರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಅಡಕೆ ಕಾರ್ಯಪಡೆಯ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೆಂದ್ರ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಅಡಕೆ ನಿಷೇಧ ಮಾಡಲಾಗುತ್ತದೆ ಎಂಬ ವದಂತಿಗಳು ಹಬ್ಬುತ್ತಿವೆ. ಆದರೆ, ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಶಾಸಕ ಹೆಚ್ ಹಾಲಪ್ಪ, ರೇಣುಕಾಚಾರ್ಯ ಮತ್ತು ಅಡಕೆ ಕಾರ್ಯಪಡೆಯ ಮುಖಂಡರ ಜೊತೆಗೂಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ ಎಂದರು.
ಅಡಕೆಗೆ ಸಂಬಂಧಿಸಿದಂತೆ ಸಿಗರೇಟ್ ಕಂಪನಿಗಳು ಲಾಬಿ ಮಾಡುತ್ತಿರುವುದು ನಿಜ. ಇದರ ಜೊತೆಗೆ ಹಿಂದಿನ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿ ಅಡಕೆ ಹಾನಿಕಾರಕ ಎಂದು ಹೇಳಿತ್ತು. ಹಾಗಾಗಿ ಈ ವಿಷಯ ನ್ಯಾಯಾಲಯದಲ್ಲಿದೆ. ನಾವು ಸಹ ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವಾಗಿದೆ. ಇದಕ್ಕಾಗಿ ತಜ್ಞರ ನೆರವು ಪಡೆದಿದ್ದೇವೆ. ರಾಮಯ್ಯ ವಿಶ್ವವಿದ್ಯಾಲಯಕ್ಕೆ ಅಡಿಕೆ ಕುರಿತು ಸಂಶೋಧನೆ ನಡೆಸಲು ಮನವಿ ಸಲ್ಲಿಸಲಾಗಿದೆ. ಅವರು ಸಹ ಒಪ್ಪಿಗೆ ಸೂಚಿಸಿದ್ದಾರೆ. ಅಡಕೆ ಸಂಶೋಧನೆಯ ವರದಿಯನ್ನಾಧರಿಸಿ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಲಿದ್ದೇವೆ ಎಂದರು.
ಅಡಕೆ ಬೆಳೆ ಹಾನಿ ಅಲ್ಲ ಎಂಬುದು ಸಾಬೀತುಪಡಿಸಿ ಬೆಳೆಗಾರರಿಗೆ ರಕ್ಷಣೆ ನೀಡುತ್ತೇವೆ. ಯಾವ ವದಂತಿಗಳಿಗೆ ಕಿವಿಗೊಡಬಾರದು ಎಂದರು.
ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಯಥಾಸ್ಥಿತಿ ಜಾರಿಗೆ ತರಬಾರದು. ಇದಕ್ಕೆ ನಮ್ಮ ವಿರೋಧವಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಮಳೆನಾಡು ಭಾಗದಲ್ಲಿ ಅಭಿವೃದ್ಧಿ ಕೆಲಸಕ್ಕೆ ಕುಂಠಿತವಾಗುತ್ತದೆ ಹಾಗೂ ರೈತರಿಗೆ ಇದು ಮರಣಶಾಸನ ವಾಗಲಿದೆ ಎಂದು ತಿಳಿಸಿದರು.
ಕಸ್ತೂರಿ ರಂಗನ್ ವರದಿ ಕುರಿತು ಹಸಿರುಪೀಠ ಈ ವರದಿಯನ್ನು ಜಾರಿ ಮಾಡುವಂತೆ ನ್ಯಾಯಾಲಯದಲ್ಲಿ ಒತ್ತಡ ಹಾಕುತ್ತಿದೆ. ಹಾಗಾಗಿ ಬಿ.ಎಸ್ ಯಡಿಯೂರಪ್ಪ ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಒಪ್ಪಿಗೆಯಿಲ್ಲದೇ ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು ಎಂದಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಮಲೆನಾಡಿನ ಅಡಕೆ ಬೆಳೆಗಾರರು ಯಾವುದೇ ಆತಂಕ ಪಡುವುದು ಬೇಡ ಎಂದರು.