ಬೆಳಗಾವಿ: ಮದುವೆಯಾದ ಮಾತ್ರಕ್ಕೆ ಏನೂ ಸಾಧಿಸಲಾಗದು ಎಂಬ ಮನಸ್ಥಿತಿಯನ್ನು ಅನೇಕ ಮಹಿಳೆಯರು ಹೊಂದಿರುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೆಳಗಾವಿಯ ವಿವಾಹಿತೆ ಮಹಿಳೆಯೊಬ್ಬರು 'ಮಿಸಸ್ ಏಷಿಯಾ ಸೂಪರ್ ಮಾಡಲ್' ಆಗಿ ಹೊರಹೊಮ್ಮಿದ್ದಾರೆ.
ಶರತ್ ಚೌಧರಿ ಡ್ರೀಮ್ ಪ್ರೊಡಕ್ಸನ್ ಹೌಸ್ ಡಿಸೆಂಬರ್ 28ರಂದು ದೆಹಲಿಯ ನೊಯ್ಡಾದಲ್ಲಿ 'ಮಿಸಸ್ ಏಷಿಯಾ ಸೂಪರ್ ಮಾಡಲ್-2023' ಸ್ಪರ್ಧೆ ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ನೀತಾ ಸಂತೋಷ ಶಿರಗಾಂವಕರ್ ಪ್ರಶಸ್ತಿ ಗೆದ್ದಿದ್ದಾರೆ.
ಈ ಹಿಂದೆ 'ಮಿಸಸ್ ಇಂಡಿಯಾ ಕರ್ನಾಟಕ' ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲಾ ವಿನ್ನರ್ ಮತ್ತು ಬೆಸ್ಟ್ ಸ್ಕಿನ್ ಟೈಟಲ್, ಮಿಸಸ್ ಇಂಡಿಯಾ ಯೂನಿವರ್ಸಲ್ ಸ್ಪರ್ಧೆಯಲ್ಲಿ 'ಮಿಸಸ್ ಬ್ಯೂಟಿಫುಲ್ ಬಾಡಿ' ಪ್ರಶಸ್ತಿ ಜಯಿಸಿದ್ದ ನೀತಾ ಈ ಬಾರಿ 'ಬ್ಯುಟಿಫುಲ್ ಸ್ಕಿನ್' ಕ್ರೌನ್ಗೆ ಮುತ್ತಿಟ್ಟಿದ್ದಾರೆ. ದುಬೈ, ದೆಹಲಿ, ಮುಂಬೈ, ಪಂಜಾಬ್, ಜಮ್ಮು ಕಾಶ್ಮೀರ, ಜೈಪುರ, ಚಂಡೀಗಢ, ಆಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಮಾಡಲ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಾಲಿವುಡ್ ನಟರಾದ ಪ್ರಿನ್ಸ್ ನರೂಲಾ ಮತ್ತು ರೋಹಿತ್ ಖಂಡೇಲವಾಲ್ ತೀರ್ಪುಗಾರರಾಗಿದ್ದರು.
ನೀತಾ ಅವರ ಪತಿ ಸಂತೋಷ ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಾರೆ. 'ಈಟಿವಿ ಭಾರತ್' ಜೊತೆಗೆ ಮಾತನಾಡಿದ ನೀತಾ ಶಿರಗಾಂವಕರ್, "ಚಿಕ್ಕಂದಿನಿಂದಲೂ ಮಾಡಲಿಂಗ್, ಸಿನಿಮಾದಲ್ಲಿ ನನಗೆ ತುಂಬಾ ಆಸಕ್ತಿ ಇತ್ತು. ಆದರೆ, ಮದುವೆಯಾದ ಬಳಿಕ ನನ್ನ ಗುರಿ ತಲುಪಲು ಆಗಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ಮದುವೆಯಾಗಿ 11 ವರ್ಷಗಳ ಬಳಿಕ ನಮ್ಮ ಪತಿ, ಅತ್ತೆ ಹಾಗು ಕುಟುಂಬಸ್ಥರ ಪ್ರೋತ್ಸಾಹದಿಂದ ಕಳೆದ ಮೂರು ವರ್ಷಗಳಲ್ಲಿ ಹಲವು ಪ್ರಶಸ್ತಿ ಗೆದ್ದಿದ್ದೇನೆ. ಈಗ ಈ ಟೈಟಲ್ ಪಡೆದಿರುವುದು ಬಹಳಷ್ಟು ಖುಷಿ ಕೊಟ್ಟಿದೆ. ಇದರಿಂದ ನನ್ನ ಬಾಲ್ಯದ ಕನಸು ಈಡೇರಿದೆ. ಮುಂದೆ ಮಾಡಲಿಂಗ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಇದು ಪ್ರೇರೇಪಿಸುತ್ತಿದೆ. ಮದುವೆಯಾದರೆ ಹೆಣ್ಣು ಮಕ್ಕಳ ಜೀವನ ಅಲ್ಲಿಗೆ ಮುಗಿಯುವುದಿಲ್ಲ. ನಿರಂತರ ಶ್ರಮ, ಆಸಕ್ತಿ ಇದ್ದರೆ ಏನು ಬೇಕಾದರೆ ಸಾಧನೆ ಮಾಡಬಹುದು. ವಯಸ್ಸು ಕೇವಲ ನಂಬರ್ ಅಷ್ಟೇ. ಸಾಧನೆ ಮಾಡಲು ಮದುವೆ, ವಯಸ್ಸು ಅಡ್ಡಿಯಾಗದು" ಎಂದು ಅವರು ಹೇಳಿದರು.
ನೀತಾ ಅವರ ಅತ್ತೆ ಉಮಾಶ್ರೀ ಶಿರಗಾಂವಕರ್ ಮಾತನಾಡಿ, "ಸೊಸೆ ಈ ಪ್ರಶಸ್ತಿ ಗೆದ್ದಿರುವುದು ನಮಗೆ ಬಹಳಷ್ಟು ಸಂತಸ ತಂದಿದೆ. ಕಷ್ಟ ಪಟ್ಟಿದ್ದಕ್ಕೆ ಫಲ ಸಿಕ್ಕಿದೆ. ದೇವರು ಆಕೆಗೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಶಕ್ತಿ ನೀಡಲಿ" ಎಂದು ಹಾರೈಸಿದರು.
ಪತಿ ಸಂತೋಷ ಅವರ ಸಹೋದರಿ ನಂದಿನಿ ಪ್ರತಿಕ್ರಿಯಿಸಿ, "ಇದು ನೀತಾ ಡ್ರೀಮ್ ಆಗಿತ್ತು. ಮನೆ ಕೆಲಸ, ಸಂಸಾರ ನೋಡಿಕೊಳ್ಳುತ್ತಲೇ ಈ ಸಾಧನೆ ಮಾಡಿರುವುದು ನಮ್ಮ ಮನೆತನಕ್ಕೆ ದೊಡ್ಡ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: 2024ರಲ್ಲಿ ಮದುವೆಯಾಗಲಿರುವ ನಟಿಮಣಿಯರು ಇವರೇ ನೋಡಿ