ಬೆಳಗಾವಿ : ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ಮಾಡಿದ ಸಚಿವ ಯು.ಟಿ ಖಾದರ್ ಜಿಲ್ಲಾಡಳಿತದ ಸಹಯೋಗದಲ್ಲಿ ನಿರ್ಮಾಣವಾದ ವ್ಯಾಯಾಮ ಶಾಲೆಗೆ ಭೇಟಿ ನೀಡಿದರು. ಹೊಸದಾಗಿ ನಿರ್ಮಾಣವಾಗಿರುವ ಕಟ್ಟಡ ಸೋರುತ್ತಿದ್ದಿದ್ದನ್ನು ಗಮನಿಸಿದ ಸಚಿವರು ಅಧಿಕಾರಿಗಳ ವಿರುದ್ಧ ಗರಂ ಆದರು.
ಕಳಪೆ ಕಾಮಗಾರಿ ಮಾಡದಂತೆ ಸಚಿವರ ಎಚ್ಚರಿಕೆ :
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದ್ದು, ವೇಗವಾಗಿ ಕಾಮಗಾರಿ ನಡೆಸುವಂತೆ ಎಚ್ಚರಿಸಿದ್ದಾರೆ.
ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ :
ಇನ್ನು ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ವಿದ್ಯಾರ್ಥಿನಿಗೆ ಚಾಕು ಇರಿತ ಪ್ರಕರಣಕ್ಕೆ ಸಚಿವರು ರಾಜೀನಾಮೆ ನೀಡಬೇಕು ಎಂಬ ಶೋಭಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಉತ್ತರ ಕೊಡಲು ಹೋಗುವುದಿಲ್ಲ. ಮಂಗಳೂರು ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆ ಕೊಡಲಿ. ಅದನ್ನ ಬಿಟ್ಟು ಯಾವುದೋ ಪ್ರಕರಣವನ್ನು ಇಟ್ಟುಕೊಂಡು ಆರೋಪ ಮಾಡುವುದಕ್ಕೆಲ್ಲ ಉತ್ತರ ಕೊಡುವುದಿಲ್ಲ ಎಂದರು.
ಪ್ರತಿಯೊಂದುಕ್ಕೂ ರಾಜಕೀಯ ಮಾಡುವ ಅವರು ಗೊಂದಲ ಸೃಷ್ಟಿಸುವ ಹೇಳಿಕೆ ನೀಡುವುದು ಸರಿಯಲ್ಲ. ಉಡುಪಿ ಜನರು ಶೋಭಾ ಕರಂದ್ಲಾಜೆ ನೋಡಿ ಮತ ಹಾಕಿಲ್ಲ. ಮೋದಿ ನೋಡಿ ಮತ ಹಾಕಿದ್ದಾರೆ ಎಂದು ಜನರೇ ಹೇಳಿದ್ದಾರೆ. ಮೊದಲು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ತಿರುಗೇಟು ನೀಡಿದರು.