ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿದ ಮಹಾ ಮಳೆಯಿಂದ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಇದರ ಪರಿಣಾಮ ಕೃಷ್ಣಾ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಶುರುವಾಗಿದೆ.
ಕಾಗವಾಡ ತಾಲೂಕಿನ ಮೋಳವಾಡ ಗ್ರಾಮದಲ್ಲಿ ಸಚಿವ ಶ್ರೀಮಂತ ಪಾಟೀಲ ಪ್ರವಾಹ ಪರಿಸ್ಥಿತಿ ಅವಲೋಕಿಸಿದರು. ಕೃಷ್ಣಾ ನದಿಯಲ್ಲಿ ಬೋಟ್ ಮೂಲಕ ನದಿ ಪ್ರವಾಹ ವೀಕ್ಷಿಸಿದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಮಳೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದೆ. ಕೊಯ್ನಾ ಜಲಾಶಯ ಭರ್ತಿಯಾಗಲು ಇನ್ನೂ 30 ಟಿಎಂಸಿ ನೀರು ಬೇಕು. ವಾರಣಾ ಡ್ಯಾಂ ಕೂಡಾ ಇನ್ನೂ ತುಂಬಿಲ್ಲ. ಈಗಾಗಲೇ ಕೃಷ್ಣಾ ನದಿ ಒಂದ ಫೀಟ್ ವರೆಗೆ ಇಳಿದಿದೆ ಎಂದರು.
ಒಂದು ವೇಳೆ ಪ್ರವಾಹ ಬಂದರೂ ಮುನ್ನೆಚ್ಚರಿಕೆಯಾಗಿ ನಮ್ಮ ಅಧಿಕಾರಿಗಳು ನದಿ ತೀರದಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ನದಿ ತೀರದ ಜನರು ಭಯ ಪಡುವ ಅವಶ್ಯಕತೆ ಇಲ್ಲ. ಈಗಾಗಲೇ ಕಾಗವಾಡ ತಾಲೂಕಿನಲ್ಲಿ ಎರಡ್ಮೂರ ಹಳ್ಳಿಗಳನ್ನ ಹೊರತು ಪಡಿಸಿ ಎಲ್ಲ ನದಿ ತೀರದ ಗ್ರಾಮಗಳಲ್ಲಿ ಬೋಟ್‌ನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.