ಬೆಳಗಾವಿ: ಗೃಹ ಖಾತೆ ವಹಿಸಿದರೆ ನಿಭಾಯಿಸುವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಮ್ಮ ಮನದಾಸೆಯನ್ನ ಹೊರ ಹಾಕಿದ್ದಾರೆ.
ಶಶಿಕಲಾ ಜೊಲ್ಲೆ ಅವರಿಗೆ ಗೃಹ ಇಲಾಖೆ ಖಾತೆ ವಹಿಸಬೇಕೆಂಬ ಶಾಸಕಿ ಹೆಬ್ಬಾಳ್ಕರ್ ಒತ್ತಾಯಿಸಿದ್ದರ ಕುರಿತಾಗಿ ಸುದ್ದಿಗಾರರ ಪ್ರಶ್ನೆಗೆ, ಬಿಡ್ರಿಪಾ ಎಂದು ನಸುನಕ್ಕ ಸಚಿವೆ ಜೊಲ್ಲೆ, ಬಳಿಕ ಗೃಹ ಖಾತೆ ಕೊಟ್ಟರೆ ನಿಭಾಯಿಸುವೆ, ಅದರಲ್ಲೇನಿದೆ ಎಂದರು. ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈಗಾಗಲೇ ಹೈಕಮಾಂಡ್ಗೆ ಲಿಸ್ಟ್ ಹೋಗಿದೆ. ಹೈಕಮಾಂಡ್ ನಿರ್ಣಯ ತೆಗೆದುಕೊಂಡರೆ ಸಂಪುಟ ವಿಸ್ತರಣೆ ಈಗಲೂ ಆಗಬಹುದು ನಾಳೆಯೂ ಆಗಬಹುದು ಎಂದರು.
ಸಚಿವ ಸಂಪುಟದಿಂದ ಶಶಿಕಲಾ ಜೊಲ್ಲೆ ಅವರನ್ನು ಕೈಬಿಡಲಾಗುತ್ತದೆ ಎಂಬ ವದಂತಿ ಕುರಿತಾದ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಸಚಿವೆ ಜೊಲ್ಲೆ, ನಾನು ಎರಡು ಬಾರಿ ಶಾಸಕಿಯಾಗಿದ್ದೇನೆ. ಪಕ್ಷದ ಸಂಘಟನೆಯಿಂದ ಗುರುತಿಸಿಕೊಂಡಿದ್ದೇನೆ. ಹೈಕಮಾಂಡ್ ಮತ್ತು ರಾಜ್ಯದ ಮುಖಂಡರಿಂದ ಯಾವುದೇ ಆದೇಶ ಬಂದರೂ ಅದಕ್ಕೆ ನಾನು ಬದ್ಧ. ಪಕ್ಷ ಹೇಳಿದ್ರೇ ಸಚಿವ ಸ್ಥಾನ ತ್ಯಾಗ ಮಾಡುತ್ತಿರಾ ಎಂದ್ರೆ, ಪಕ್ಷ ಏನು ಹೇಳುತ್ತೋ ಅದನ್ನ ಮಾಡಲು ಸಿದ್ದ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.