ಬೆಳಗಾವಿ/ ಬೆಂಗಳೂರು : ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯವುಳ್ಳ ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತ ಬೇಡಿಕೆ ಸರ್ಕಾರದಿಂದ ಸ್ವೀಕೃತವಾಗಿದ್ದು, ಇದೀಗ ಪರಿಶೀಲನೆಯಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಶರಣಪ್ರಕಾಶ ಪಾಟೀಲ್ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಇಂದು ಶಾಸಕ ಸತೀಶ್ ಕೃಷ್ಣ ಸೈಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರವಾರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುವ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಮಂಜೂರಾಗಿದ್ದ 4 ತಜ್ಞ ವೈದ್ಯರು ಹಾಗೂ 3 ಉಪಮುಖ್ಯ ವೈದ್ಯಾಧಿಕಾರಿ ಹುದ್ದೆಗಳು ಸೇರಿದಂತೆ ಒಟ್ಟು 7 ಹುದ್ದೆಗಳನ್ನು ಪ್ರಾಧ್ಯಾಪಕರು/ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳನ್ನಾಗಿ ಮರು ಪದನಾಮೀಕರಿಸಿ ಆದೇಶಿಸಲಾಗಿದೆ ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಮಂಜೂರಾಗಿರುವ ಹುದ್ದೆಗಳಿಗೆ ಈಗಾಗಲೇ 2 ಬಾರಿ ನೇರ ಸಂದರ್ಶನ ಕರೆಯಲಾಗಿತ್ತು. ಆದರೆ ಯಾವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿಲ್ಲ. ಹಾಗಾಗಿ ಸದರಿ ಹುದ್ದೆಗಳನ್ನು ಮತ್ತೊಮ್ಮೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಅನುಮತಿ ನೀಡಲಾಗಿದೆ ಎಂದು ಸಚಿವ ಪಾಟೀಲ್ ಅವರು ಹೇಳಿದರು.
ಇದನ್ನೂ ಓದಿ: ಈಡೇರದ ಉತ್ತರ ಕನ್ನಡಿಗರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು: ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ
ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ: ಕೆ.ಎಂ.ಇ.ಆರ್.ಸಿ ಅಡಿ 300 ಕೋಟಿ ರೂ.ಗಳನ್ನು ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಮೀಸಲಿರಿಸಲಾಗಿದೆ. ಸರ್ಕಾರದಿಂದ ಮುಂದಿನ ಆಯವ್ಯಯದಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಗಣೇಶ್ ಜೆ.ಎನ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಳ್ಳಾರಿ ಸುತ್ತಮುತ್ತ 300 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕ್ಯಾನ್ಸರ್ ಆಸ್ಪತ್ರೆಯಿಲ್ಲ. ಅಗತ್ಯವಾಗಿ ಬಳ್ಳಾರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಬೇಕಿದೆ. ಸದ್ಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ದಾಖಲೆಗಳ ಪ್ರಕಾರ 2020ರಲ್ಲಿ 3783, 2021ರಲ್ಲಿ 3859 ಹಾಗೂ 2022ರಲ್ಲಿ 3951 ಜನ ಕ್ಯಾನ್ಸರ್ ರೋಗಿಗಳು ವಾರ್ಷಿಕವಾಗಿ ದಾಖಲಾಗಿದ್ದಾರೆ. ಇಲ್ಲಿ ವಿಕಿರಣ ಉಪಕರಣ ಹಾಗೂ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟಂತೆ ನುರಿತ ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ವಿಮ್ಸ್ ರೆಡಿಯೋಥೆರಪಿ ವಿಭಾಗದಲ್ಲಿ ಕೋಬಾಲ್ಟ್, ಬ್ರೇಕಿ, ಕೀಮೋ, ಇನ್‌ಪ್ಯೂಜನ್ ತೆರಪಿಗಳು ಹಾಗೂ ರೇಡಿಯೇಷನ್ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಶಿಫಾರಸು ಮಾಡಲಾಗುತ್ತಿದೆ ಎಂದು ಹೇಳಿದರು.
37 ಮೈನಿಂಗ್, 38 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬಳ್ಳಾರಿ ಜಿಲ್ಲೆಯಲ್ಲಿವೆ. ಇವುಗಳ ಮಾಲಿನ್ಯದಿಂದ ಸ್ಥಳೀಯ ಜನರಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಬಡ ಜನರು ದೂರದ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯುವುದು ದುಸ್ತರವಾಗಿದೆ. ದಯಮಾಡಿ ಜಿಲ್ಲೆಯಲ್ಲಿ ಕೆ.ಎಂ.ಇ.ಆರ್.ಸಿ ಅನುದಾನದಲ್ಲಿ ಕಿದ್ವಾಯಿ ಮಾದರಿಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವಂತೆ ಸಚಿವರಲ್ಲಿ ಶಾಸಕ ಗಣೇಶ್ ಜೆ.ಎನ್. ಕೋರಿದರು.