ಬೆಳಗಾವಿ: ಮೂರು ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಸಚಿವ ಕೆ.ಎನ್.ರಾಜಣ್ಣ ತಮ್ಮ ವಯಕ್ತಿಕ ಹೇಳಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಪಕ್ಷ ಅಂತಿಮವಾಗಿ ನಿರ್ಧರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಕುಮಾರ ಗಂಧರ್ವ ರಂಗಮಂದಿರ ಆವರಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಂತೂ ಅದರ ಚರ್ಚೆಯ ಅವಶ್ಯಕತೆ ಇಲ್ಲ. ನಾನಂತೂ ಡಿಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ಸಚಿವ ಕೆ ಎನ್ ರಾಜಣ್ಣ ತಮ್ಮ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಇನ್ಮುಂದೆ ಪಕ್ಷದಲ್ಲಿ ಚರ್ಚೆ ಪ್ರಾರಂಭ ಆಗಬಹುದು. ಡಿಸಿಎಂ ಹುದ್ದೆ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ, ನಾನಂತೂ ಆಕಾಂಕ್ಷಿ ಅಲ್ಲ. ಪಕ್ಷ ಒಂದು ವೇಳೆ ನಿರ್ಧರಿಸಿದರೆ ಅವರ ಸಾಮರ್ಥ್ಯ ನೋಡಿ ಡಿಸಿಎಂ ಮಾಡುತ್ತದೆ ಎಂದರು.
ಸರ್ಕಾರದ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಪಾದಯಾತ್ರೆ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ಪಾದಯಾತ್ರೆ ಮಾಡಲಿ, ಅದರಿಂದ ನಮಗೆ ದುಪ್ಪಟ್ಟು ಲಾಭವಾಗಲಿದೆ. ಹಿಂದೆ ಬಿಜೆಪಿ ಸರ್ಕಾರದ ಸಮಸ್ಯೆಗಳ ನಡುವೆ ಕಷ್ಟ ಕಾಲದಲ್ಲೂ ಸಹ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದು ನಮ್ಮ ಸರ್ಕಾರದ ಸಾಧನೆ ಎಂದು ಸಮರ್ಥಿಸಿಕೊಂಡರು. ಇನ್ನು 2008ರಲ್ಲಿ ಸಿದ್ದರಾಮಯ್ಯ, ಹೆಚ್ ಸಿ ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಬಿಜೆಪಿ ಸೇರಲು ರೆಡಿಯಾಗಿದ್ದರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳು ಈ ಸಂಬಂಧ ಮಾತನಾಡಿದ್ದಾರೆ. ಎಲ್ಲರೂ ಹೇಳಿಕೆ ಕೊಡುವುದು ಸರಿಯಲ್ಲ. ರಾಜಕೀಯದಲ್ಲಿ ಎಲ್ಲಾ ರೀತಿಯ ಚರ್ಚೆಗಳು ಆಗುತ್ತವೆ. ನಾಲ್ಕು ಗೋಡೆಗಳ ಮಧ್ಯೆ ಬೇರೆ ಇರುತ್ತೆ, ಹೊರಗಡೆ ಬೇರೆ ರೀತಿಯಲ್ಲೇ ಚರ್ಚೆಯಾಗುತ್ತದೆ. ಚರ್ಚೆಗಳು ಆಗಿದ್ದನ್ನೆಲ್ಲಾ ನೀವು ಕ್ಯಾಚ್ ಮಾಡಿದ್ರೆ ಹೇಗೆ ಎಂದು ಸತೀಶ್ ಜಾರಕಿಹೊಳಿ ಮುಗುಳ್ನಕ್ಕರು.
ಮುಂದುವರಿದು ಮಾತನಾಡಿದ ಅವರು, ಒಂದೊಂದು ಸಲ ಅಂಗಡಿಗೆ ಹೋಗಿ ಬಟ್ಟೆ ಸರಿ ಇದೆಯೋ ಇಲ್ಲವೋ ಎಂದು ನೋಡುತ್ತೇವೆ. ಬಟ್ಟೆ ಸರಿ ಇಲ್ಲ ಎಂದರೆ ಬೇರೆ ಅಂಗಡಿಗೆ ಹೋಗುತ್ತೇವೆ. ಯಾವುದೋ ಒಂದು ವಿಚಾರ ಎಲ್ಲೋ ಮಾತಾಡಿದ್ದನ್ನು ಬಹಿರಂಗಪಡಿಸಲು ಆಗೋದಿಲ್ಲ ಎಂದು ಹೇಳಿದರು.
ಜಿಲ್ಲಾ ವಿಭಜನೆ ವಿಚಾರದ ಬಗ್ಗೆ ಮಾತನಾಡಿ, ಕಾಲ ಬಂದೇ ಬರುತ್ತೆ ಆಗ ಮಾಡಿಸೋಣ. ಜಿಲ್ಲೆಯ ಬಹಳಷ್ಟು ಜನರು ಜಿಲ್ಲಾ ವಿಭಜನೆಗೆ ಆಸಕ್ತಿ ತೋರಿಸಿದ್ದೇವೆ. ಇದಕ್ಕೆ ಮೇಲಿನವರು, ಸರ್ಕಾರದವರು ಗ್ರೀನ್ ಸಿಗ್ನಲ್ ಕೊಡಬೇಕು. ಗಡಿ ಉಸ್ತುವಾರಿ ಸಚಿವರ ನೇಮಕಾತಿ ಬಗ್ಗೆ, ಪ್ರತ್ಯೇಕವಾಗಿ ಆ ಸಚಿವರನ್ನು ನೇಮಕ ಮಾಡುವ ಅವಶ್ಯಕತೆ ಇಲ್ಲ. ಅದನ್ನು ಬೆಂಗಳೂರಿನಲ್ಲಿಯೇ ಕುಳಿತು ಮಾಡಬಹುದು ಎಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ ಜೊತೆಗೆ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿದ್ದ ಬಗ್ಗೆ ಪ್ರತಿಕ್ರಿಯಿಸಿ, ಅವರು ಪಕ್ಷ ಬಿಡುವ ವಿಚಾರ ಇಲ್ಲ. ಅವರು ಪಕ್ಷ ಬಿಡೋದಿಲ್ಲ, ಅವರು ಮೂಲ ಕಾಂಗ್ರೆಸ್ಸಿಗರು. ನೋಟಿಸ್ ನೀಡಿದ್ದಕ್ಕೆ ಹರಿಪ್ರಸಾದ್ ಅವರೇ ಉತ್ತರ ನೀಡುತ್ತಾರೆ. ಪಕ್ಷದ ಪರವಾಗಿ ನಾವು ಹೋಗಿ ಮಾತುಕತೆ ಮಾಡಿ ಬಂದಿದ್ದೇವೆ. ಇದು ಸಕ್ಸಸ್ ಆಗಿದೆಯಾ ಎಂದು ಕಾದು ನೋಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಬಿಜೆಪಿಯೊಳಗೆ ಸಿಎಂ ಕುರ್ಚಿ ಸೇರಿದಂತೆ ಎಲ್ಲಾ ಸ್ಥಾನಗಳು ಮಾರಾಟವಾಗಿವೆ: ಸಚಿವ ಶಿವರಾಜ ತಂಗಡಗಿ