ಚಿಕ್ಕೋಡಿ (ಬೆಳಗಾವಿ): "ಲೋಕಸಭಾ ಚುನಾವಣೆಗೆ ಇನ್ನು ತುಂಬಾ ಸಮಯವಿದೆ. ಯಾರು ಸ್ಪರ್ಧೆ ಮಾಡಬೇಕೆಂಬುದು ಇನ್ನೂ ಅಂತಿಮವಾಗಿಲ್ಲ. ಪಕ್ಷ ಯಾರನ್ನು ಗುರುತಿಸುತ್ತದೋ ಅವರು ಸ್ಪರ್ಧೆ ಮಾಡುತ್ತಾರೆ. ನಾವು ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಸ್ಥಾನವನ್ನು ಗೆಲ್ಲುತ್ತೇವೆ" ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುನ್ನೂರು ಪ್ರವಾಸ ಮಂದಿರದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಎರಡೂವರೆ ವರ್ಷದ ಬಳಿಕ ಹಿರಿಯ ಸಚಿವರು ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ನಾನು ಈಗಾಗಲೇ ಸಾಕಷ್ಟು ಸಾರಿ ಹೇಳಿದ್ದೇನೆ. ನಮ್ಮ ಹಂತದಲ್ಲಿ ಚರ್ಚೆ ಆಗಿಲ್ಲ, ದೆಹಲಿ ಲೆವಲ್‌ನಲ್ಲಿ ಚರ್ಚೆ ಆಗಿರಬಹುದು, ಆಗದೇ ಇರಬಹುದು. ಅದರ ಬಗ್ಗೆ ಸ್ಪಷ್ಟೀಕರಣ ಕೊಡಲು ಆಗಲ್ಲ, ನಿರ್ಧಾರ ತೆಗೆದುಕೊಳ್ಳೋ ಹಂತದಲ್ಲಿ ನಾವಿಲ್ಲ, ನಿರ್ಧಾರ ತಗೆದುಕೊಳ್ಳೋರು ಬೇರೆ. ನಿರ್ಧಾರ ತಗೆದುಕೊಳ್ಳೋರು ದೆಹಲಿಯಲ್ಲಿ ಇದ್ದಾರೆ, ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಮಾಡುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ" ಎಂದು ಹೇಳಿದರು.
ಕೆಲವು ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ವಿಚಾರವಾಗಿ ಮಾತನಾಡಿ, "ಈ ಬಗ್ಗೆ ಚರ್ಚೆ ಆಗುತ್ತಿದೆ, ನಿರ್ಧಾರ ಆಗಿಲ್ಲ. ಬೆಳಗಾವಿ ಜಿಲ್ಲೆಯ ಎರಡೂ ಸ್ಥಾನ ಗೆಲ್ಲಬೇಕೆಂಬ ಆಸೆ ಇದೆ. ಇದಕ್ಕಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಲ್ಲಿಯವರೆಗೂ ಕಾದು ನೋಡೋಣ" ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ: ಸಿಎಂ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಸಭೆ; ಶೀಘ್ರ ಕಾಮಗಾರಿ ಬಿಲ್ ಬಿಡುಗಡೆಗೆ ಮನವಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ ಶಾಸಕರ ವಾಗ್ವಾದ: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಭವದ ವಿಚಾರವಾಗಿ ಇಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಮತ್ತು ಕಾಂಗ್ರೆಸ್ ಶಾಸಕ ರಾಜು ಸೇಠ್ ನಡುವೆ ಪರಸ್ಪರ ವಾಗ್ದಾಳಿ ನಡೆದಿದೆ. ಮರಾಠಿ ಭಾಷೆಯಲ್ಲಿಯೇ ನೊಟೀಸ್ ನೀಡುವಂತೆ ಎಂಇಎಸ್ ನಗರಸೇವಕರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವರ್ಗಾವಣೆ ಸೇರಿ ಕೆಲ ಪ್ರಮುಖ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು. ಪಾಲಿಕೆ ಸಭೆಯ ಆರಂಭದಲ್ಲಿ ನಾಡಗೀತೆ ಮುಗಿದ ಬಳಿಕ ಎಂಇಎಸ್ನ ಮೂವರು ನಗರ ಸೇವಕರು ಮರಾಠಿ ಭಾಷೆಯಲ್ಲಿ ನೊಟೀಸ್ ಸೇರಿದಂತೆ ಇತರ ಕಾಗದಪತ್ರಗಳನ್ನು ಕೊಡುವಂತೆ ಆಗ್ರಹಿಸಿ ಧರಣಿಗೆ ಮುಂದಾದರು. ಈ ವೇಳೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಗರ ಸೇವಕರ ನಡುವೆ ಮಾತಿನ ಚಕಮಕಿ ನಡೆಯಿತು.
ಅನೇಕ ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲೇ ಇರುವ ಅಧಿಕಾರಿಗಳ ವರ್ಗಾವಣೆಗೆ ಇಂದಿನ ಸಭೆಯಲ್ಲಿ ಠರಾವ್ ಪಾಸ್ ಮಾಡಲಾಯಿತು. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ನಿಯಮದ ಪ್ರಕಾರ ಗ್ರೇಡ್-ಎ ಮತ್ತು ಗ್ರೇಡ್-ಬಿ ವರ್ಗದ ಅಧಿಕಾರಿಗಳು ಒಂದೇ ಹುದ್ದೆಯಲ್ಲಿ ಮೂರು ವರ್ಷ ಇರಬೇಕು. ಸಿ ಗ್ರೇಡ್ ಅಧಿಕಾರಿಗಳು ನಾಲ್ಕು ವರ್ಷ, ಡಿ ಗ್ರೇಡ್ ನೌಕರರು 7 ವರ್ಷದ ಅವಧಿಗೆ ಒಂದೇ ಹುದ್ದೆಯಲ್ಲಿ ಇರಬಹುದು ಎಂದು ಪಾಲಿಕೆ ಸದಸ್ಯ ಡಾ. ಶಂಕರಗೌಡ ಪಾಟೀಲ್ ಹೇಳಿದರು.