ಬೆಳಗಾವಿ: ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರ ಬಾಲ್ಯ ಸ್ನೇಹಿತ ಹಾಗೂ ಗೋಕಾಕ್ ನಗರಸಭೆ ಮಾಜಿ ಅಧ್ಯಕ್ಷ ಜನಾಬ್ ಶೇಖ್ ಫತೇವುಲ್ಲಾ ಕೋತ್ವಾಲ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆರು ಸಲ ನಗರಸಭೆ ಸದಸ್ಯರಾಗಿದ್ದ ಕೋತ್ವಾಲ್ ಒಂದು ಸಲ ಅಧ್ಯಕ್ಷರಾಗಿದ್ದರು. ಮೂರು ದಶಕಗಳಿಂದ ಸಚಿವ ರಮೇಶ್ ಜಾರಕಿಹೊಳಿಯವರ ಜೊತೆ ನಿಂತು, ಅವರ ರಾಜಕೀಯ ಶ್ರೇಯಸ್ಸಿಗೆ ಕೋತ್ವಾಲ್ ಶ್ರಮಿಸಿದ್ದರು. ಸ್ನೇಹಿತನ ಅಗಲಿಕೆಗೆ ಸಚಿವರು ಕಂಬನಿ ಮಿಡಿದಿದ್ದಾರೆ.
ನನ್ನ ಹಿರಿಯ ಸ್ನೇಹಿತ ಜನಾಬ್ ಶೇಖ್ ಫತೇವುಲ್ಲಾ ಕೋತ್ವಾಲ್ ಅವರ ಅಕಾಲಿಕ ಮರಣದಿಂದ ನಾನು ದಿಗ್ಭ್ರಮೆಗೊಂಡಿದ್ದೇನೆ. ನನ್ನ ಬಾಲ್ಯದ ಗೆಳೆಯನಾಗಿದ್ದ ಕೋತ್ವಾಲ್, ನನ್ನ ರಾಜಕೀಯ ಪ್ರಗತಿಯಲ್ಲಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ ನಿಂತು ನನ್ನ ಜಯಕ್ಕೆ ಪ್ರಮುಖ ಪಾತ್ರ ವಹಿಸುತ್ತದ್ದರು. ಗೋಕಾಕ್ ನಗರಸಭೆಗೆ ಸತತ ಆರನೇ ಬಾರಿ ಆಯ್ಕೆಯಾಗಿದ್ದರು ಮತ್ತು ನಗರಸಭೆಯ ಅಧ್ಯಕ್ಷರಾಗಿ ನಗರದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದರು. ಜಾತ್ಯತೀತ ವ್ಯಕ್ತಿಯಾಗಿದ್ದ ಕೋತ್ವಾಲ್, ಗೋಕಾಕ್ ನಗರದ ಅಂಜುಮನ್ ಇಸ್ಲಾಂ ಸಮಿತಿ ಮತ್ತು ತಂಜೀಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ಊರದೇವತೆ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಆಚರಣೆಯ ಸಮಿತಿ ಸದಸ್ಯರಾಗಿ ಜಾತ್ರೆ ಯಶಸ್ವಿಗೊಳಿಸುತ್ತಿದ್ದರು. ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಾಗ ನನ್ನೊಂದಿಗೆ ನಿಂತು, ಜನಜಾಗೃತಿ ಮೂಡಿಸಿದ್ದ ಕೋತ್ವಾಲ್, ಅವಿರತವಾಗಿ ಕೊರೊನಾ ಹರಡುವಿಕೆಯ ವಿರುದ್ಧ ಹೋರಾಡಿದ್ದರು. ಕೋತ್ವಾಲ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ಜಾರಕಿಹೊಳಿ ತಿಳಿಸಿದ್ದಾರೆ.