ಬೆಳಗಾವಿ : ಕಾಂಗ್ರೆಸ್ ಪಕ್ಷ ಜನರಿಗೆ ಬದುಕು ಕಟ್ಟಿ ಕೊಟ್ಟರೆ ಬಿಜೆಪಿಯವರು ಭಾವನೆಗಳನ್ನು ಕಟ್ಟಿ ಕೊಡುತ್ತಾರೆ. ನಾವು ಬದುಕು, ಜೀವನ ಎಂದು ನೋಡುತ್ತೇವೆ. ಆದರೆ, ಅವರು ಜನರ ಭಾವನೆಗಳ ಜೊತೆಗೆ ಚೆಲ್ಲಾಟ ಆಡುತ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಚೆಯಿಂದಲೂ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣೆಗಳ ಸಂದರ್ಭದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿ ಬಿಜೆಪಿ ಪರವಾಗಿ ವಾತಾವರಣ ನಿರ್ಮಾಣ ಮಾಡಿಕೊಳ್ಳುವ ಮೂಲಕ ಜನರ ಭಾವನೆಗಳ ಜೊತೆಗೆ ಚೆಲ್ಲಾಟ ಆಡುವುದು ಬಿಜೆಪಿಯವರಿಗೆ ರೂಢಿಯಾಗಿದೆ. ಜನಸಾಮಾನ್ಯರು ಸಾಯುತ್ತಿದ್ದರೂ ಇವರು ಮಾತ್ರ ರಾಜಕೀಯ ಮಾಡುತ್ತಿದ್ದಾರೆ. 2023ರ ಚುನಾವಣೆ ಫಲಿತಾಂಶ ಇವರಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ತಮ್ಮ ಮನೆ ಸರಿಯಾಗಿ ಇಟ್ಟುಕೊಳ್ಳಲಿ : ಕಾಂಗ್ರೆಸ್‍ನಲ್ಲಿ ಒಳ ಜಗಳವಿದೆ ಎಂಬ ನಳೀನಕುಮಾರ್ ಕಟೀಲ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಕಟೀಲ್ ಅಣ್ಣನವರು ಬಹಳ ಹಿರಿಯರು, ರಾಜ್ಯಾಧ್ಯಕ್ಷರಿದ್ದಾರೆ. ಇಡೀ ದೇಶವನ್ನು ಸುತ್ತುತ್ತಾರೆ, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಅವರ ಪಕ್ಷದಲ್ಲಿ ಇರೋದನ್ನು ಅವರು ಸರಿ ಮಾಡಿಕೊಳ್ಳಲಿ.
ನಮ್ಮ ಪಕ್ಷದಲ್ಲಿ ಸರಿ ಮಾಡಿಕೊಳ್ಳುವುದು, ಚರ್ಚೆ ಮಾಡುವುದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ನಾಯಕರು ಸರಿ ಇದ್ದಾರೆ. ಯಾವುದೇ ಒಳಜಗಳ ಇಲ್ಲ. ಕಾಂಗ್ರೆಸ್ ಪಕ್ಷ ಎಂದರೆ ಸಮುದ್ರ ಇದ್ದ ಹಾಗೆ, ಕೂಡಿರುವ ಅಣ್ಣ ತಮ್ಮಂದಿರೇ ಜಗಳ ಮಾಡಿಕೊಳ್ಳುತ್ತಾರೆ. ಹೀಗಾಗಿ ನಾವು ನಮ್ಮ ಮನೆಯನ್ನು ಸರಿ ಮಾಡಿಕೊಳ್ಳುತ್ತೇವೆ. ಅವರು ಅವರ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.
ನಿಜವಾದ ಹೀರೋಗಳು ಮತದಾರರು : ರಾಜಕಾರಣ ಆಗಲಿ ಯಾವುದೇ ಕ್ಷೇತ್ರದಲ್ಲಾಗಲೀ ಹೀರೋ ಆದವನು ಜೀರೋ ಆಗುತ್ತಾನೆ. ಜೀರೋ ಇದ್ದವನು ಹೀರೋ ಆಗುತ್ತಾನೆ. ಯಾವಾಗಲೂ ಹೀರೋ ಆಗಿ ಉಳಿಯುವವರು ಜನಸಾಮಾನ್ಯರು. ಜನಪ್ರತಿನಿಧಿಗಳು ಹೀರೋಗಳಲ್ಲ. ಮತದಾರರು, ಜನಸಾಮಾನ್ಯರು ನಮ್ಮನ್ನು ಹೀರೋಗಳನ್ನಾಗಿ ಮಾಡುತ್ತಾರೆ.
ನಮ್ಮ ದೃಷ್ಟಿಯಲ್ಲಿ ನಿಜವಾದ ಹೀರೋಗಳು ಮತದಾರರು. ಹೀಗಾಗಿ ಜನರ ತೀರ್ಮಾನಕ್ಕೆ ಬಿಡೋಣ. ಒಂದು ಸಮಯದಲ್ಲಿ ಒಂದಂಕಿಯಿಂದ ಶುರು ಮಾಡಿಕೊಂಡು ಈಗ ದೇಶಾದ್ಯಂತ ಪಸರಿಸಿದ್ದಾರೆ. ಸೂರ್ಯ ಮುಳುಗುತ್ತಾನೆ, ಹುಟ್ಟುತ್ತಾನೆ, ಕತ್ತಲೆ ಕಳೆದ ಮೇಲೆ ಬೆಳಕು ಬರುತ್ತದೆ. ಕಾಂಗ್ರೆಸ್ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಇದೆ. ನಾವು ಇಂದು ಸೋತಿರಬಹುದು. ಆದರೆ, ನಾವು ಈಗಲೂ ಅತಿ ಹೆಚ್ಚು ಮತಗಳನ್ನು ಪಡೆಯುತ್ತಿದ್ದೇವೆ ಹಾಗೂ ಹೆಚ್ಚಿನ ರಾಜ್ಯಗಳಲ್ಲಿ ಇನ್ನೂ ಕಾಂಗ್ರೆಸ್ ಅಸ್ಥಿತ್ವದಲ್ಲಿದೆ. ಇವತ್ತು ನಾವು ಕಷ್ಟದಲ್ಲಿರಬಹುದು, ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಪುಟಿದೇಳಲಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಬಿಜೆಪಿ ಸಂಘಟನೆ ಆಗಲು ಯಡಿಯೂರಪ್ಪ ಅವರ ಪ್ರಾಮಾಣಿಕ ಪ್ರಯತ್ನ ಕಾರಣ. ಯಡಿಯೂರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಯಡಿಯೂರಪ್ಪ ಎಂದು ಇತ್ತು. ಇವರು ಲಿಂಗಾಯತ ಸಮಾಜ, ಯಡಿಯೂರಪ್ಪನವರ ಜೊತೆಗೆ ಇದ್ದೇವೆ ಎಂದು ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದರು. ಆದರೆ, ಅಂತಹವರನ್ನೇ ಮುಖ್ಯಮಂತ್ರಿ ಸ್ಥಾನದಿಂದ ಕೈ ಬಿಟ್ಟರು. ಮೊನ್ನೆ ಅವರ ಮಗ ವಿಜಯೇಂದ್ರಗೆ ಎಂಎಲ್‍ಸಿ ಟಿಕೆಟ್ ಕೊಡಲಿಲ್ಲ. ಸಿದ್ದರಾಮಯ್ಯ, ಶಿವಕುಮಾರ್ ಅವರ ವಿಚಾರ ಬಿಡಿ, ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಬಿಜೆಪಿ ಪಕ್ಷ ನಡೆಸಿಕೊಳ್ಳುವುದನ್ನು ಮೊದಲು ಕಟೀಲ್ ಸಾಹೇಬರು ನೋಡಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಇದೇ ವೇಳೆ ತಿರುಗೇಟು ನೀಡಿದರು.
ಓದಿ : ಕರಾವಳಿಯಲ್ಲಿ ಮರಳುಗಾರಿಕೆ ಬಂದ್.. ಬೀದಿಗೆ ಬಂದ ಸಾವಿರಾರು ಕುಟುಂಬಗಳು !