ಬೆಳಗಾವಿ: ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಹಣ ಹಂಚಿಕೆ ಮಾಡಿದ್ದಾಗಿ ಆರೋಪಿಸಿದ್ದ ಬಿಜೆಪಿ ನಾಯಕರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರ ಆರೋಪ ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂದು ಹೇಳಲು ಬಯಸುತ್ತೇನೆ. ಚುನಾವಣೆಯಲ್ಲಿ ಹಣ, ಹೆಂಡ ಹಂಚಿರುವ ಬಗ್ಗೆ ಬಿಜೆಪಿ ಆರೋಪ ಮಾಡುತ್ತಿದೆ.
ಆದರೆ ಬಿಜೆಪಿ ನಾಯಕರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಲು ಶಾಸಕ ವಿಶ್ವನಾಥ ಮನೆಗೆ ಹೋಗಿ 5 ಕೋಟಿ ರೂ ಆಮಿಷ ಒಡ್ಡಿದ್ದರು. ವಿಧಾನಸಭೆ ಅಧಿವೇಶನದಲ್ಲಿ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರೇ ತಿಳಿಸಿದ್ದಾರೆ. ಅಧಿಕಾರಕ್ಕಾಗಿ ಹಣ ಖರ್ಚು ಮಾಡಿದವರು ಬಿಜೆಪಿಗರು. ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡಿದ್ದಾರೆ. ಅವರೇ ಈಗ ಈ ರೀತಿ ಆರೋಪ ಮಾಡುತ್ತಿರುವುದು ಬಾಲಿಶ ಅನಿಸುತ್ತದೆ ಎಂದರು.
ಪ್ರಕಾಶ ಹುಕ್ಕೇರಿ ಮೆಟ್ರಿಕ್ ಫೇಲ್ ಎಂದು ಪ್ರಭಾಕರ ಕೋರೆ ವ್ಯಂಗ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ ಹುಕ್ಕೇರಿ ಅವರು ಎಸ್ಎಸ್ಎಲ್‌ಸಿ ಪಾಸಾಗಿದ್ದಾರೋ ಅಥವಾ ಫೇಲ್ ಆಗಿದ್ದಾರೋ ಗೊತ್ತಿಲ್ಲ. ಆದರೆ ಜನರ ಪರೀಕ್ಷೆಯಲ್ಲಿ 8 ಬಾರಿ ಪಾಸ್ ಆಗಿ ಭೇಷ್ ಎನಿಸಿಕೊಂಡಿದ್ದಾರೆ. 82 ವಯಸ್ಸಿನ ಯಡಿಯೂರಪ್ಪ ಸಾಹೇಬ್ರನ್ನು ಪಕ್ಕದಲ್ಲಿ ಕೂರಿಸಿಕೊಂಡು 70 ವರ್ಷದ ಗೋವಿಂದ ಕಾರಜೋಳ ಅವರು ಪ್ರಕಾಶ ಹುಕ್ಕೇರಿಗೆ ಮುದಿ ಎತ್ತು ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದರು.
ಇದನ್ನೂ ಓದಿ: ಆಧುನಿಕ ಯಾತ್ರಾಸ್ಥಳವಾಗಲಿದೆ ರಾಜಾಧಿರಾಜ ಗೋವಿಂದ ದೇವಸ್ಥಾನ: ರಾಷ್ಟ್ರಪತಿ ಕೋವಿಂದ್