ಚಿಕ್ಕೋಡಿ : ಪಕ್ಷದಲ್ಲಿ ಮೂಲ ಬಿಜೆಪಿ ಹಾಗೂ ವಲಸಿಗರ ನಡುವೆ ಯಾವುದೇ ತಿಕ್ಕಾಟವಿಲ್ಲ. ಅದು ಮಾಧ್ಯಮಗಳ ಸೃಷ್ಟಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸಚಿವ ರಮೇಶ್ ಜಾರಕಿಹೊಳಿಯಿಂದ ಸಿ.ಪಿ ಯೋಗೇಶ್ವರ್ ಪರ ದೆಹಲಿ ಲಾಬಿ ವರ್ಕೌಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವೈಯಕ್ತಿಕವಾದ ಹೆಸರುಗಳ ಬಗ್ಗೆ ನಾನು ಚರ್ಚೆ ಮಾಡಿಲ್ಲ. ಯೋಗೇಶ್ವರ್ ಇರಬಹುದು ಮತ್ತೊಬ್ಬರು ಇರಬಹುದು, ಸಾಕಷ್ಟು ಜನ ಸಚಿವಾಕಾಂಕ್ಷಿಗಳಿದ್ದಾರೆ. ಮಂತ್ರಿ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಯವರ ವ್ಯಾಪ್ತಿಯಲ್ಲಿದೆ ಎಂದು ತಿಳಿಸಿದರು.
'ಕತ್ತಿ ಕೂಡಾ ಸಚಿವ ಸ್ಥಾನದ ಲಿಸ್ಟ್‌ನಲ್ಲಿದ್ದಾರೆ'
ಶಾಸಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕತ್ತಿ ಕೂಡ ಲಿಸ್ಟ್‌ನಲ್ಲಿದ್ದಾರೆ ಎಂದರು.
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡುತ್ತಾ, ಈ ವಿಚಾರ ಪತ್ರಿಕೆಯಲ್ಲಿ ನಾನು ನೋಡ್ತಿದ್ದೇನೆ, ಮೂಲ ಎಲ್ಲಿಂದ ಬಂತು ಅಂತಾ ನಾನು ಹುಡುಕುತ್ತಿದ್ದೇನೆ. ಹೈಕಮಾಂಡಾಗಲೀ, ಪಕ್ಷದ ಮುಖಂಡರಾಗಲಿ ನನ್ನ ಜೊತೆ ಯಾರೂ ಈ ವಿಚಾರ ಚರ್ಚಿಸಿಲ್ಲ. ಆದರೆ, ಸ್ಪರ್ಧೆ ಮಾಡ್ತಾರೆ ಅಂತ ನನ್ನ ಹೆಸರು ಬರ್ತಿದೆ. ಇದರ ಮೂಲ ಎಲ್ಲಿ ನೀವೆ ನನಗೆ ಹುಡುಕಿ ಕೊಡಿ. ಸ್ಪರ್ಧೆ ಬಗ್ಗೆ ಯಾರು ಅಂತ ಇನ್ನೂ ನಿರ್ಣಯವೇ ಆಗಿಲ್ಲ, ಅದಕ್ಕೆಲ್ಲ ನಾನು ಹೇಗೆ ಉತ್ತರಿಸಲಿ ಎಂದು ಮರು ಪ್ರಶ್ನೆ ಹಾಕಿದರು.
'ಸಿಎಂ ಹುದ್ದೆ ಖಾಲಿ ಇಲ್ಲ'
ಮುಖ್ಯಮಂತ್ರಿ ರೇಸ್‌ನಲ್ಲಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ನಾನು ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೀನಿ ಎಂಬ ಪ್ರಶ್ನೆನೇ ಬರೋದಿಲ್ಲ ಎಂದು ಹೇಳಿದರು.