ಬೆಳಗಾವಿ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್‌ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಹಾಗಾಗಿ ಎಸ್‌ಐಟಿ ಮೇಲೆ ಸಂಶಯ ಪಡುವಂತದ್ದು ಏನು ಇಲ್ಲವೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸರ್ಕಾರದ ಕಪಿಮುಷ್ಠಿಯಲ್ಲಿದೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿಡಿ ಪ್ರಕರದಲ್ಲಿ ಎಸ್‌ಐಟಿ ಸೂಕ್ತ ರೀತಿಯಲ್ಲಿ ಪಾರದರ್ಶಕ ಕೆಲಸ ಮಾಡುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ವಿಚಾರಣೆ ನಡೆಯುತ್ತಿದ್ದು, ಎಸ್‌ಐಟಿ ಮೇಲೆ ಸಂಶಯ ಪಡುವಂತದ್ದು ಏನು ಇಲ್ಲ ಎಂದರು.
ಕಾಂಗ್ರೆಸ್ ಶೂನ್ಯಕ್ಕೆ ಬಂದಿದೆ
ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಿದ್ದರಾಮಯ್ಯ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಸರ್ಕಾರದ ವಿರುದ್ಧ ಮಾತನಾಡಲು ಪ್ರತಿಪಕ್ಷಗಳಿಗೆ ಯಾವುದೇ ವಿಷಯವಿಲ್ಲ. ಹೀಗಾಗಿ, ಆಡಳಿತ ಯಂತ್ರ ಕುಸಿದಿದೆ ಎಂದು ಹೇಳ್ತಿದ್ದಾರೆ. ಅವರು ಮೊನ್ನೆ ಬಜೆಟ್ ಅಧಿವೇಶನದಲ್ಲಿ ಭಾಷಣ, ಚರ್ಚೆ ಮಾಡಿಲ್ಲ. ಜನಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿಲ್ಲ. ಸದನದ ಬಾವಿಗಿಳಿದು ಧರಣಿ ಕುಳಿತು ಕಲಾಪವನ್ನು ಹಾಳು ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆಡಳಿತ ಯಂತ್ರ ಕುಸಿದಿದೆ ಎಂಬ ವಿಚಾರ ಅಲ್ಲಿಯೇ ಹೇಳಬಹುದಿತ್ತಲ್ವಾ? ಹಸಿಸುಳ್ಳು ಹೇಳೋದನ್ನು ನಿಲ್ಲಿಸಿ, ಜನ ನಿಮ್ಮನ್ನು ನಂಬುವುದಿಲ್ಲ. ಕಾಂಗ್ರೆಸ್ ಬಹುತೇಕ ಶೂನ್ಯಕ್ಕೆ ಬರುತ್ತಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಶೂನ್ಯವಾಗಿದೆ. ಈ ರೀತಿ ಮಾತನಾಡಿ ಸ್ವಲ್ಪ ಉಳಿದಿರುವ ಅಸ್ತಿತ್ವವನ್ನೂ ಕಳೆದುಕೊಳ್ಳುತ್ತೀರಿ ಎಂದು ತಿರುಗೇಟು ನೀಡಿದರು.
ಓದಿ : ಎಸ್ಐಟಿ ಮೇಲೆ ಜಾರಕಿಹೊಳಿ ಒತ್ತಡ ಆರೋಪ: ತನಿಖೆ ಬಗ್ಗೆ ಸಿಡಿ ಲೇಡಿಗೆ ಮತ್ತೆ ಗುಮಾನಿ, ಕಮಿಷನರ್ಗೆ ಪತ್ರ
ಎಲ್ಲರೂ ಯಡಿಯೂರಪ್ಪ ಜೊತೆಗಿದ್ದೇವೆ
ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ ಮಧ್ಯೆ ಪರಸ್ಪರ ವಾಗ್ವಾದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ ಶಾಸಕರು, ಸಚಿವರು ಕೆಲಸ ಮಾಡ್ತಿದ್ದಾರೆ. ಸುಮ್ಮನೆ ಬೇರೆ ಬೇರೆ ವಿಚಾರ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಮ್ಮಲ್ಲಿ ಯಾವುದೂ ಅಸಮಾಧಾನ ಇಲ್ಲ, ಎಲ್ಲರೂ ಒಗ್ಗಟ್ಟಾಗಿ ಯಡಿಯೂರಪ್ಪ ಜೊತೆಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಡಿಕೆಶಿಗೆ ಯಾವ ನೈತಿಕತೆ ಇದೆ?
ಸಿಎಂ ರಾಜೀನಾಮೆ ನೀಡಬೇಕು, ಇಲ್ಲ ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿರುವ ಬಗ್ಗೆ ಮಾತನಾಡಿ, ಡಿ.ಕೆ. ಶಿವಕುಮಾರ್‌ಗೆ ಕೇಳಲು ಏನು ಹಕ್ಕಿದೆ, ಯಾವ ನೈತಿಕತೆ ಇದೆ? ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ನಡೆಸುತ್ತಿದ್ದೇವೆ. ಒಳ್ಳೆಯ ನಿರ್ಧಾರಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುತ್ತೇವೆ ತಿರುಗೇಟು ನೀಡಿದರು.