ಬೆಳಗಾವಿ: ಸಿದ್ದರಾಮಯ್ಯ ಕೇವಲ ರಾಜಕಾರಣಿ ಅಷ್ಟೇ ಅಲ್ಲ, ಹಿರಿಯ ನಾಯಕರು ಹಾಗೂ ವಕೀಲ ವೃತ್ತಿ ಮಾಡಿದವರು. ಸಿದ್ದರಾಮಯ್ಯ ಮಾತನಾಡುವಾಗ ಇತ್ತೀಚೆಗೆ ಮಾನಸಿಕ ಸ್ಥಿತಿಗತಿ ಸರಿಯಿಲ್ಲ. ಆವೇಶದಿಂದ ಮಾತನಾಡುತ್ತಿದ್ದಾರೆ. ಹೀಗಾಗಿ, ಅವರು ಸತ್ಯವನ್ನ ತಿಳಿದುಕೊಳ್ಳುವ ಕೆಲಸ ಮಾಡಬೇಕು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೋವಿಂದ ಕಾರಜೋಳ ಅವರು, ಈ ದೇಶದಲ್ಲಿ ದೇಶಭಕ್ತಿ ಹೆಚ್ಚಿಸುವ ಕೆಲಸವನ್ನು ಆರ್‌ಎಸ್‌ಎಸ್ ಯುವಜನಾಂಗಕ್ಕೆ ಮಾಡ್ತಿದೆ. ನಮ್ಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸಲು ಕಾರ್ಯಕ್ರಮ ಹಾಕಿಕೊಂಡು, ಮನೆ ಮಠ ಬಿಟ್ಟು ಸಂತರ ಹಾಗೆ ಆರ್‌ಎಸ್‌ಎಸ್ ಕಾರ್ಯಕರ್ತರು ಕಾರ್ಯಾಲಯದಲ್ಲಿ ಉಳಿದುಕೊಂಡು ದೇಶ ಸೇವೆ ಮಾಡ್ತಾರೆ. ಪೂರ್ವಾಶ್ರಮದ ಹಂಗು ತೊರೆದು ದೇಶಕ್ಕೆ ದುಡಿಯುವ ಸ್ವಯಂ ಸೇವಕರ ಸಂಘ ಇದಾಗಿದೆ. ಅದರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ ಎಂದರು.
ಈ ದೇಶದಲ್ಲಿ ಉತ್ತಮ ಕೆಲಸ ಮಾಡಿರುವವರು ಆರ್‌ಎಸ್‌ಎಸ್ ನವರು. ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಸಿದ್ದರಾಮಯ್ಯರದ್ದು ಕೀಳು ಅಭಿರುಚಿ ಅಷ್ಟೇ. ಆರ್‌ಎಸ್‌ಎಸ್ ಮೂಲ ಕೆದಕಿದವರ ಮೂಲ ಎಲ್ಲೆಲ್ಲಿದೆ ಅಂತಾ ಹೇಳಿದ್ದಾರೆ. ಪಠ್ಯ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಅವರ ಸಲಹೆ ಸೂಚನೆಗಳಿದ್ರೆ ತಿಳಿಸುವ ಕೆಲಸ ಮಾಡಬೇಕು ಎಂದು ಸಚಿವ ಕಾರಜೋಳ ಹೇಳಿದರು.
ಓದಿ: ಕಾಂಗ್ರೆಸ್ ದಲಿತರಿಗೆ ಸಿಎಂ ಆಗುವ ಅವಕಾಶ ಕೊಡುತ್ತೆ: ಸಿದ್ದರಾಮಯ್ಯ ಭೇಟಿ ಬಳಿಕ ಪರಮೇಶ್ವರ್ ಆಶಾಭಾವ