ಬೆಳಗಾವಿ: ಬೆಳಗಾವಿಯ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಜೈಲಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೈಲು ಅಧಿಕಾರಿಗಳನ್ನು ಈ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂಡಲಗಾ ಜೈಲಿನಲ್ಲಿ ಹಣ ಕೊಟ್ಟರೆ ಕೈದಿಗಳಿಗೆ ಮೊಬೈಲ್ ಫೋನ್ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲದಿದ್ದರೆ ಸರಿಯಾದ ಸೌಲಭ್ಯಗಳನ್ನು ನೀಡುವುದಿಲ್ಲ ಎಂಬ ಬಗ್ಗೆ ಸ್ವತಃ ಅಲ್ಲಿನ ಕೈದಿಯೊಬ್ಬ ಜೈಲಿನಿಂದಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ. ಅಲ್ಲದೇ ಇಲ್ಲಿನ ಕೈದಿಯೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲದೇ ಕೈದಿಗಳು ಹೊಡೆದಾಡಿಕೊಂಡಿದ್ದ ಘಟನೆ ಸೇರಿ ಹಲವಾರು ವಿಚಾರಗಳಿಂದ ಇಡೀ ರಾಜ್ಯದಲ್ಲೇ ಹಿಂಡಲಗಾ ಜೈಲು ತೀವ್ರ ಟೀಕೆಗೆ ಗ್ರಾಸವಾಗಿತ್ತು.
ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಬೆಳಗಾವಿಗೆ ಭೇಟಿ ನೀಡಿದ ವೇಳೆ ಹಿಂಡಲಗಾ ಜೈಲಿಗೂ ತೆರಳಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಜೈಲಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಮತ್ತೆ ಈ ರೀತಿ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸುವಂತೆ ಜೈಲು ಅಧಿಕಾರಿಗಳಿಗೆ ತಾಖೀತು ಮಾಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, ಹಿಂಡಲಗಾ ಜೈಲಿನಲ್ಲಿನ ಅವ್ಯವಸ್ಥೆಗಳ ಬಗ್ಗೆ ಅನೇಕ ಬಾರಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇನ್ಮುಂದೆ ಈ ರೀತಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸುವಂತೆ ಮೇಲಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ವೇಳೆ, ಶಾಸಕ ಆಸೀಫ್ ಸೇಠ್, ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜೈಲು ಅಧೀಕ್ಷಕ ಕೃಷ್ಣಕುಮಾರ ಸೇರಿ ಮತ್ತಿತರರು ಇದ್ದರು.
ಈ ಹಿಂದೆ ಕೂಡ ಹೈಕೋರ್ಟ್ ನಿ.ನ್ಯಾಯಮೂರ್ತಿ ಬಿ. ವೀರಪ್ಪ ಹಿಂಡಲಗಾ ಜೈಲಿಗೆ ದಿಢೀರ್ ಭೇಟಿ ನೀಡಿ, ಸುದೀರ್ಘ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಜೈಲಿನೊಳಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದ ಅವರು, ಜೈಲು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೈಲಿನಲ್ಲಿನ ಅವ್ಯವಸ್ಥೆಗೆ ಅಲ್ಲಿನ ಮೇಲಧಿಕಾರಿಗಳಿ ಗೂ ಛೀಮಾರಿ ಹಾಕಿದ್ದರು.
ಇದನ್ನೂ ಓದಿ: ಧಾರವಾಡ ಜೈಲಿನಲ್ಲಿ ಕೈದಿ ಮತ್ತು ಸಿಬ್ಬಂದಿ ನಡುವೆ ಮಾರಾಮಾರಿ