ಬೆಳಗಾವಿ: ಮಾಹಿತಿ ಕೊರತೆ ಹಾಗೂ ಸಂಪೂರ್ಣ ವಿಚಾರ ಗೊತ್ತಿಲ್ಲದೇ ಇರೋದ್ರಿಂದ ನನ್ನ ಬಗ್ಗೆ ಕೆಲವು ಹೇಳಿಕೆ ನೀಡಿದರೂ ಸ್ವೀಕರಿಸುತ್ತೇನೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದ ಮತದಾರ ಯಾರಿಗೂ ಕೂಡ ಸ್ಪಷ್ಟ ಬಹುಮತ ನೀಡಿಲ್ಲ. ಅತೀ ಹೆಚ್ಚು ಸೀಟುಗಳನ್ನು ಗೆದ್ದುಕೊಂಡಿರುವ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ಕೊಟ್ಟಾಗ ಮೂರು ದಿನಗಳಲ್ಲಿ ನಡೆದ ವಿಶ್ವಾಸ ಮತಯಾಚನೆ ವೇಳೆ ಸರ್ಕಾರ ರಚನೆ ಮಾಡಲು ವಿಫಲವಾದೆವು.
ಎರಡು ಪ್ರತಿಪಕ್ಷಗಳು ಸೇರಿಕೊಂಡು ಕಾಂಗ್ರೆಸ್, ಜೆಡಿಎಸ್ ಸರ್ಕಾರ ರಚನೆಯಾಗಿತ್ತು. ಹದಿನಾಲ್ಕು ತಿಂಗಳ ಕಾಲ ಸಮಿಶ್ರ ಸರ್ಕಾರ ಅಧಿಕಾರ ನಡೆಸಿತು. ಆದ್ರೆ ರಾಜ್ಯದ ಜನರು ಸಮಿಶ್ರ ಸರ್ಕಾರದ ಆಡಳಿತಕ್ಕೆ ಭ್ರಮನಿರಸನರಾಗಿದ್ದರು. ಆ ಸಂದರ್ಭದಲ್ಲಿ ಕೆಲವೊಂದಿಷ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಮನನೊಂದು ಆ ಸರ್ಕಾರದಿಂದ ಹೊರಬಂದರು. ರಾಜ್ಯದಲ್ಲಿ ಸುಭದ್ರ ಸರ್ಕಾರ ನೀಡುವ ಉದ್ದೇಶದಿಂದ ಹದಿನೈದರಿಂದ ಎಪ್ಪತ್ತು ಶಾಸಕರು ಬಿಜೆಪಿಗೆ ಬಂದ್ರು. ಈ ಎಲ್ಲ ಪ್ರಕ್ರಿಯೆ ಕೆಲವೊಂದು ಶಾಸಕರಿಗೆ ಗೊತ್ತಿಲ್ಲ. ಹೀಗಾಗಿ ಆ ಬಗ್ಗೆ ತಿಳಿ ಹೇಳುವ ಕೆಲಸವನ್ನು ಬಿಜೆಪಿ ಪಕ್ಷದ ಹಿರಿಯರು ಮನದಟ್ಟು ಮಾಡಿಕೊಡಬೇಕಿತ್ತು ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಂದ ನಂತರ ನಮಗೆ ಬೆಂಬಲ ನೀಡಿದ್ದರಿಂದ ಬಿಜೆಪಿ ಸರ್ಕಾರ ರಚನೆ ಆಗಿದೆ. ಕೆಲ ಶಾಸಕರ ಅನುಭವದ ಕೊರತೆಯಿಂದ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಕರೆದು ಪಕ್ಷದ ವರಿಷ್ಠರು ಮಾತನಾಡ್ತಾರೆ. ಹೀಗಾಗಿ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದರು.
ಇದನ್ನೂ ಓದಿ: ಮೋದಿ-ಯಡಿಯೂರಪ್ಪ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಕರ್ನಾಟಕದ ವಿಕಾಸ : ಅಮಿತ್ ಶಾ
ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಏನೆಂಬುದನ್ನು ತಿಳಿಸಿಕೊಡುವ ಕೆಲಸವನ್ನು ವರಿಷ್ಠರು ಮಾಡ್ತಾರೆ ಎಂದರು. ಇನ್ನು, ಸಾಲ ಮಾಡಿ ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನ್ನ ವೈಯಕ್ತಿಕ ವಿಚಾರವಾಗಿದೆ. ಸಚಿವ ರಮೇಶ ಜಾರಕಿಹೊಳಿ ಯಾವ ಅರ್ಥದಲ್ಲಿ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಪಕ್ಷ ನನ್ನ ಅಳಿಲು ಸೇವೆಗೆ ಅವಕಾಶ ಕೊಟ್ಟಿದೆ. ಇನ್ನು ಶಾಸಕರ ಭಿನ್ನಮತ್ತಕ್ಕೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪನವರಿಗೆ ಸಿಡಿ ತೋರಿಸಿ ಮಂತ್ರಿ ಆಗಿದ್ದಾರೆ ಎಂಬ ಯತ್ನಾಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮತ್ತು ಡಿಕೆಶಿ ನನ್ನ ಬಗ್ಗೆ ಮಾತಾಡ್ತಾರೆ. ನಾನು ಆ ಬಗ್ಗೆ ವಿಚಾರ ಮಾಡೋದಿಲ್ಲ. ಶಾಸಕರು ಅಸಮಾಧಾನವಾದಾಗ ನನ್ನ ಬಗ್ಗೆ ಪ್ರತಿಕ್ರಿಯೆ ನೀಡಿರಬಹುದು. ಆ ಬಗ್ಗೆ ನಾನು ಉತ್ತರಿಸಲ್ಲ. ನನ್ನ ಬಳಿ ಯಾವುದೇ ಸಿಡಿ ಇಲ್ಲ. ಇದು ಅಪ್ರಸ್ತುತ ವಿಚಾರ. ಏನೇ ಅಸಮಾಧಾನ ಇದ್ರೂ, ಪಕ್ಷದ ವೇದಿಕೆಯಲ್ಲಿಯೇ ವರಿಷ್ಠರು ಚರ್ಚೆ ನಡೆಸ್ತಾರೆ.
ಮೆಗಾ ಸಿಟಿ ಹಗರಣ ವಿಚಾರಕ್ಕೆ, ಡಿಕೆಶಿಗೆ ಮತ್ತು ಕುಮಾರಸ್ವಾಮಿ ನನ್ನ ರಾಜಕೀಯ ವಿರೋಧಿಗಳು. ಹೀಗಾಗಿ ನನ್ನ ಮೇಲೆ ಕಳೆದ ಇಪ್ಪತೈದು ವರ್ಷಗಳಿಂದ ವೈಯಕ್ತಿಕ ಹಾಗೂ ಖಾಸಗಿ ವಿಚಾರಕ್ಕೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನನ್ನ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ. 25 ವರ್ಷಗಳಿಂದ ನಾನು ಮತ್ತು ರಮೇಶ್ ಜಾರಕಿಹೊಳಿ ಒಳ್ಳೆಯ ಸ್ನೇಹಿತರು ಎಂದರು.