ಬೆಳಗಾವಿ: ಗಡಿಭಾಗದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಎಂಇಎಸ್ ಪಾಲಿಕೆ ಚುನಾವಣೆ ಹೊಸ್ತಿಲಲ್ಲೇ ಆಘಾತಕ್ಕೆ ಸಿಲುಕಿದೆ. ಪಾಲಿಕೆ ಚುನಾವಣೆ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಡದ್ರೋಹಿ ಎಂಇಎಸ್ಗೆ ಶಾಕ್ ಕೊಟ್ಟಿದ್ದು, ಬಂಡಾಯ ಅಭ್ಯರ್ಥಿಯನ್ನು ತನ್ನತ್ತ ಸೆಳೆದುಕೊಂಡಿದೆ.
ಬೆಳಗಾವಿ 28ನೇ ವಾರ್ಡ್ನ ಎಂಇಎಸ್ ಬಂಡಾಯ ಅಭ್ಯರ್ಥಿ ರವಿ ಶಿಂಧೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಲ್ಲಿನ ಧರ್ಮನಾಥ ಭವನದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ರವಿ ಶಿಂಧೆ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಧ್ವಜ ನೀಡಿ ರವಿ ಶಿಂಧೆಯನ್ನು ಪಕ್ಷಕ್ಕೆ ಸ್ವಾಗತ ಮಾಡಲಾಯಿತು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ರವಿ ಶಿಂಧೆ, ಸ್ಥಳೀಯ ಮರಾಠಾ ಸಮುದಾಯದ ನಾಯಕರ ಜೊತೆಗೆ ಚರ್ಚಿಸಿ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಈ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲಿದ್ದೇನೆ. ನಮ್ಮ ಸಮುದಾಯ ಕೂಡ ಬಿಜೆಪಿಯನ್ನೇ ಬೆಂಬಲಿಸಲಿದೆ. ಎಂಇಎಸ್ ನನ್ನನ್ನು ನಿರ್ಲಕ್ಷ್ಯ ಮಾಡಿರುವ ಕಾರಣ ಬಿಜೆಪಿ ಸೇರಿಕೊಂಡಿದ್ದೇನೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸೆಪ್ಟೆಂಬರ್ 3ರಂದು ನಡೆಯಲಿದೆ.
ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರು ತಮಿಳುನಾಡಿನ ಕೂಲಿ ಕಾರ್ಮಿಕರು - ಡಿಜಿಪಿ ಸೂದ್