ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಹಿನ್ನೆಲೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಇಂದು ಪ್ರತಿಭಟನೆ ಹಿನ್ನೆಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಬೆಳಗಾವಿ ಗಡಿ ವಿಷಯದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರದ ಕಿಡಿಗೇಡಿಗಳ ವಿರುದ್ಧ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇಂದು ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಕರ್ನಾಟಕಕ್ಕೆ ಬರುವುದಾಗಿ ಘೋಷಣೆ ಮಾಡಿದ್ದರು. ಪರಿಸ್ಥಿತಿ ಅರಿತ ಬೆಳಗಾವಿ ಡಿಸಿ ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಆದರೆ, ಮಹಾರಾಷ್ಟ್ರ ನಾಯಕರ ಉದ್ಧಟತನಕ್ಕೆ ರೊಚ್ಚಿಗೆದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿ ನಗರದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕಮಿಷನರ್ ಡಾ. ಎಂ.ಬಿ. ಬೋರಲಿಂಗಯ್ಯ ಅವರು ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಇಬ್ಬರು ಡಿಎಸ್ಪಿ, ಇಬ್ಬರು ಎಸಿಪಿ, 4 ಜನ ಸಿಪಿಐ, 10 ಪಿಎಸ್ಐ 12 ಕೆಎಸ್ಆರ್ಪಿ, 8 ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜನೆ ಮಾಡಿದ್ದಾರೆ.
ಇದಲ್ಲದೇ ವರುಣ ವಾಹನ, ರ‍್ಯಾಪಿಡ್ ಇಂಟರ್ವೆನ್ಷನ್ ವೆಹಿಕಲ್ ನಿಯೋಜಿಸಲಾಗಿದೆ. ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ್ ನೇತೃತ್ವದಲ್ಲಿ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್, ಕಾಗವಾಡ ಚೆಕ್ಪೋಸ್ಟ್ ಸೇರಿದಂತೆ ಮಹಾರಾಷ್ಟ್ರದಿಂದ ಬೆಳಗಾವಿ ಪ್ರವೇಶ ಮಾಡುವ ಎಲ್ಲ ಚೆಕ್ ಪೋಸ್ಟ್ಗಳಲ್ಲೂ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ.
ಕರವೇ ಕಾರ್ಯಕರ್ತರಿಂದ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ: ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಕ್ಲಬ್ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನಗರದ ಚೆನ್ನಮ್ಮ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಪ್ರತಿಭಟನೆಗೆ ಬೆಂಗಳೂರು ಸೇರಿ ರಾಜ್ಯದ ಇತರ ಕಡೆಯಿಂದ ಕರವೇ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಿದ್ದು, ಚೆನ್ನಮ್ಮ ವೃತ್ತದಲ್ಲಿ ಸಾವಿರಕ್ಕೂ ಹೆಚ್ಚು ಕನ್ನಡ ಬಾವುಟ ಪ್ರದರ್ಶನ ಮಾಡಲಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರೋದು ಬೇಡ, ಬಂದ್ರೆ ಕಾನೂನು ಕ್ರಮ: ಸಿಎಂ ಬೊಮ್ಮಾಯಿ