ಬೆಳಗಾವಿ: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು. ಇಲ್ಲವೇ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ನೀಡಬೇಕು ಎಂದು ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ನಡೆದ ಮರಾಠ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಬೆಳಗುಂದಿಯಲ್ಲಿ ರವಳನಾಥ ಪಂಚಕ್ರೋಶಿ ಸಾಹಿತ್ಯ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಾಡದ್ರೋಹಿ ನಿರ್ಣಯ ಅಂಗೀಕರಿಸಲಾಗಿದೆ. ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಎಂಇಎಸ್ ಮುಖಂಡ ಶಿವಾಜಿ ಸುಂಟಕರ್ ಚಾಲನೆ ನೀಡಿದ್ದರು.
(ಓದಿ: ಕರ್ನಾಟಕ ಸೇರಲು ಮತದಾನ ಬಹಿಷ್ಕರಿಸಿದ ಮಹಾರಾಷ್ಟ್ರದ ಗಡಿ ಗ್ರಾಮ)
ಕೇಂದ್ರ ಸರ್ಕಾರ ಗಡಿಭಾಗವನ್ನ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಿ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥ ಆಗುವವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು. ಇಲ್ಲವೇ ಗಡಿ ಭಾಗದಲ್ಲಿ ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ನೀಡಲಿ. ಈ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಮಹಾರಾಷ್ಟ್ರ ಸರ್ಕಾರ ಅನುದಾನ ನೀಡಬೇಕೆಂದು ಇದೇ ವೇಳೆ ಒತ್ತಾಯಿಸಿದ್ದಾರೆ. ಮರಾಠಿ ಸಾಹಿತ್ಯ ಸಮ್ಮೇಳನದ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದ ಬೆನ್ನಲ್ಲೇ ಮರಾಠಿ ಸಾಹಿತ್ಯ ಸಮ್ಮೇಳನ ಈ ನಿರ್ಣಯ ಅಂಗೀಕರಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
(ಓದಿ: 145 ಬಸ್ಗಳಲ್ಲಿ ಸವದತ್ತಿಗೆ ಆಗಮಿಸಿದ್ದ ಮಹಾರಾಷ್ಟ್ರ ಭಕ್ತರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಿದ ಬೆಳಗಾವಿ ಪೊಲೀಸರು)