ಬೆಳಗಾವಿ: ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಹುಟ್ಟೂರು ಕಾಕತಿಯಲ್ಲಿರುವ ವಾಡೆ, ಕೋಟೆ ಮತ್ತಿತರ ಸ್ಥಳಗಳ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ರೂಪಿಸಿ ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಚೆನ್ನಮ್ಮನ ಹುಟ್ಟೂರು ಕಾಕತಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಕತಿಯ ಸಿದ್ಧೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಅರಮನೆ(ವಾಡೆ) ಇರುವಂತಹ ಜಾಗವನ್ನು ಸರ್ಕಾರವೇ ಪಡೆದುಕೊಂಡು ಅದನ್ನು ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ನಾಡಿನ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಚೆನ್ನಮ್ಮನ ಹುಟ್ಟೂರು ಕಾಕತಿ ಮತ್ತು ಕಿತ್ತೂರು ಸಮಗ್ರ ಅಭಿವೃದ್ಧಿಗೆ ಆದ್ಯತೆಯ ಮೇರೆಗೆ ಕೆಲಸ ಮಾಡುವಂತೆ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಕೋಟೆ ಅಭಿವೃದ್ಧಿಗೆ ಪ್ರಯತ್ನ: ಕಾಕತಿಯಲ್ಲಿರುವ ಕೋಟೆಯು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಇರುವುದರಿಂದ ಸಂಬಂಧಿಸಿದ ಇಲಾಖೆಯ ಜತೆ ಚರ್ಚಿಸಿ ಕೋಟೆ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಭರವಸೆ ನೀಡಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಿತ್ತೂರು, ಕಾಕತಿ ಅಭಿವೃದ್ಧಿಗೆ ಈಗಾಗಲೇ ಅನೇಕ ಕಾಮಗಾರಿಗಳನ್ನು ಜಾರಿಗೆ ತರಲಾಗಿದೆ. ಸಮಗ್ರ ಅಭಿವೃದ್ಧಿಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಪ್ರಾಧಿಕಾರದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದ ಬೈಲಹೊಂಗಲ ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ, ಪ್ರಾಧಿಕಾರದ ವತಿಯಿಂದ ಈಗಾಗಲೇ 3.30 ಕೋಟಿ ರೂ. ವೆಚ್ಚದಲ್ಲಿ ವಾಡೆಯ ರಸ್ತೆ, ವಿದ್ಯುತ್ ದೀಪ ಅಳವಡಿಕೆ ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.