ಅಥಣಿ: ಮಂಗಳವಾರದಂದು ಸಿಎಂ ಬಿ.ಎಸ್. ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ನೆರೆ ಬಾಧಿತ ಗ್ರಾಮಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ಇತ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಾಲೂಕಿನ ಕೃಷ್ಣಾ ನದಿ ತೀರದ ಜಮೀನಿನ ಬೆಳೆ ಹಾನಿ ಪರಿಶೀಲನೆ ನಡೆಸಿದರು.
ತಾಲೂಕಿನ ನಂದೇಶ್ವರ, ಸತ್ತಿ , ಜನವಾಡ, ಸವದಿ, ಝುಂಜರವಾಡ, ಹಾಗೂ ಇನ್ನಿತರ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ರೈತರ ಜೊತೆ ಸಮಾಲೋಚನೆ ನಡೆಸಿ ಬೆಳೆ ಹಾನಿ ಮಾಹಿತಿ ಪಡೆದುಕೊಂಡರು. ಈ ವರ್ಷ ನದಿ ತೀರದಲ್ಲಿ ಕಬ್ಬು ಬೆಳೆಯಲಾಗಿತ್ತು. ಆದರೆ ಬೆಳೆ ಸಂಪೂರ್ಣ ಜಲಾವೃತವಾಗಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರ ಮುಂದೆ ರೈತರು ಅಳಲು ತೋಡಿಕೊಂಡರು.
ಇದೇ ಸಂದರ್ಭದಲ್ಲಿ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ್ ಕುಮಟಳ್ಳಿ ಈಟಿವಿ ಭಾರತ ಜೊತೆ ಮಾತನಾಡಿ, ನಾಳೆ ಸಿಎಂ ವೈಮಾನಿಕ ಸಮೀಕ್ಷೆಗೂ ಮುನ್ನ ಬೆಳಗಾವಿ ಜಿಲ್ಲೆಯ ಶಾಸಕರು, ಸಚಿವರು, ಜನಪ್ರತಿನಿಧಿಗಳೊಂದಿಗೆ ಸಿಎಂ ಸಭೆ ನಡೆಸಲಿದ್ದಾರೆ. ನಾನು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಉಂಟಾದ ಬೆಳೆ ಹಾನಿಯ ಮಾಹಿತಿ ಸಂಗ್ರಹಿಸಿದ್ದೇನೆ. ಇದನ್ನು ನಾಳೆ ಸಿಎಂ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಅಥಣಿ ತಾಲೂಕಿನ 17 ಗ್ರಾಮಗಳಲ್ಲಿ ಕಳೆದ ಬಾರಿ ಪ್ರವಾಹಕ್ಕೆ ತುತ್ತಾಗಿ ಅಪಾರ ಪ್ರಮಾಣದ ಬೆಳೆ, ಮನೆ, ರಸ್ತೆಗಳು ಹಾಳಾಗಿದ್ದರಿಂದ ಅಥಣಿ ಭಾಗಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡುತ್ತೇನೆ ಹಾಗೂ ಈ ಬಾರಿಯ ಪ್ರವಾಹದ ಬೆಳೆ ಹಾನಿ ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಅಥಣಿ ತಾಲೂಕಿನಲ್ಲಿ 536 ಕೋಟಿ ರೂಪಾಯಿ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಮತ್ತು ಸುಲಭ ಸಂಚಾರ ರಸ್ತೆಗಳಿಗೆ ಮುಂದಿನ ದಿನದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಅದರಲ್ಲೂ ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಹೇಳಿದರು.