ಬೆಳಗಾವಿ : ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ನಡೆಸುತ್ತಿದ್ದ ಕರಾಳ ದಿನಕ್ಕೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಹೀಗಾಗಿ, ಬೆಳಗಾವಿಯ ಮರಾಠಿ ಮಂದಿರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎಂಇಎಸ್ ಪುಂಡರು ಪ್ರತಿಭಟನಾ ಸಭೆ ನಡೆಸಿದ್ದಾರೆ. ಎಂಇಎಸ್ಗೆ ಬೆಂಬಲ ಸೂಚಿಸಿ ಮಹಾರಾಷ್ಟ್ರ ಸಚಿವರು ಕೂಡ ಕೈಗೆ ಕಪ್ಪು ಪಟ್ಟಿ ಧರಿಸಿ ಬೆಂಬಲ ನೀಡಿದ್ದಾರೆ.
ಈ ಕುರಿತು ಮುಂಬೈನಲ್ಲಿ ಮಾತನಾಡಿದ ಸಚಿವ ಜಯಂತ್ ಪಾಟೀಲ, ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ನಿರಂತರ ಅನ್ಯಾಯವಾಗುತ್ತಿದೆ. ಇದರ ವಿರುದ್ಧವಾಗಿ ಎನ್‌ಸಿಪಿ ಕಾರ್ಯಕರ್ತರ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರವೂ ಇದರ ವಿರುದ್ಧ ಹೋರಾಟ ನಡೆಸುತ್ತೆ ಎಂದಿದ್ದಾರೆ.
ಅಲ್ಲದೇ ಕರ್ನಾಟಕ ಗಡಿಭಾಗದ ಮರಾಠಿ ಭಾಷಿಕರ ಪರವಾಗಿ ಮಹಾರಾಷ್ಟ್ರ ಸರ್ಕಾರವಿದೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಆದರೂ ಮರಾಠಿ ಭಾಷಿಕರ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಮರಾಠಿ ಭಾಷಿಕರಿರುವ ಕರ್ನಾಟಕದ ಗಡಿಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ ವಿಶ್ವಾಸವಿದೆ ಎಂದು ಹೇಳುವ ಮೂಲಕ ಉದ್ಧಟತನ ತೋರಿದ್ದಾರೆ.