ಚಿಕ್ಕೋಡಿ: ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗಿಂದಲೂ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ಮೂಲ ಸೌಕರ್ಯ ಕಲ್ಪಿಸಲು ವಿಫಲವಾಗಿದೆ. ನಾವು ಕನ್ನಡಿಗರು. ಭಾಷಾವಾರು ಸಮಯದಲ್ಲಿ ನಮಗೆ ಅನ್ಯಾಯವಾಗಿದೆ. ದಯವಿಟ್ಟು ನಮ್ಮನ್ನು ಕರ್ನಾಟಕಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜತೆ ಕರ್ನಾಟಕ ಸರ್ಕಾರ ಮಾತುಕತೆಗೆ ಮುಂದಾಗಲಿ ಎಂದು ಮಹಾರಾಷ್ಟ್ರದ ಉಮರಾಣಿ ಗ್ರಾಮಸ್ಥರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಮಲತಾಯಿ ಧೋರಣೆ: ಕಳೆದ 50 ವರ್ಷಗಳಿಂದ ಜತ್ತ ತಾಲೂಕಿನ 42 ಗ್ರಾಮಗಳಿಗೆ ಮೂಲ ಸೌಕರ್ಯದ ಜತೆಗೆ ನೀರಾವರಿ ಯೋಜನೆಗಳನ್ನು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಪಡಿಸಿಲ್ಲ. ಜತ್ತ ತಾಲೂಕಿನ 42 ಗ್ರಾಮಗಳು ಸಂಪೂರ್ಣವಾಗಿ ಕನ್ನಡಿಗರ ಗ್ರಾಮಗಳಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರ ನಮ್ಮ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮತ್ತೊಮ್ಮೆ ಸಿಎಂಗೆ ಮನವಿ: ಆದಷ್ಟು ಶೀಘ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹಾ ಕನ್ನಡಿಗರ ರಕ್ಷಣೆ ಮಾಡಲೇಬೇಕು. ನಮ್ಮ ಅಜ್ಜ ಮುತ್ತಾತ್ತರ ಕಾಲದಿಂದಲೂ ಜತ್ತ ತಾಲೂಕಿನಲ್ಲಿ ಸೂಕ್ತ ಚಿಕಿತ್ಸೆ, ಶಿಕ್ಷಣ, ಕುಡಿಯುವ ನೀರು ಇಲ್ಲದೇ ಪ್ರತಿ ಕ್ಷಣ ನರಕಯಾತನೆ ಅನುಭವಿಸುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ. ಪಕ್ಕದ ಕರುನಾಡಿನ ಗ್ರಾಮಗಳಲ್ಲಿ ಅಭಿವೃದ್ಧಿಯಿಂದ ಸಂತ್ರಪ್ತಿಯಿಂದ ಜನರು ವಾಸಿಸುತ್ತಿದ್ದಾರೆ. ನಮಗೂ ಆ ಭಾಗ್ಯ ಕಲ್ಪಿಸುವಂತೆ ಮಹಾ ಕನ್ನಡಿಗರು ಸಿಎಂ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನಮಗೆ ನ್ಯಾಯ ಕೊಟ್ಟಿಲ್ಲ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಗ್ರಾಮಸ್ಥರು ಒಮ್ಮತದಿಂದ ಮತದಾನ ಬಹಿಷ್ಕಾರ ಮಾಡುವುದಾಗಿ ಸಭೆ ನಡೆಸಲಾಗಿದೆ ಎಂದು ಉಮರಾಣಿ ಗ್ರಾಮಸ್ಥರು ಹೇಳಿದರು.
ಇದನ್ನೂ ಓದಿ: ಕರ್ನಾಟಕ ಸೇರುವುದಾಗಿ ಘೋಷಿಸಿದ ಗಡಿಭಾಗದ ಜನರು.. ಹಲವು ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ನೋಟಿಸ್