ಬೆಳಗಾವಿ: ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಮತ್ತೊಮ್ಮೆ ಕನ್ನಡ ನೆಲದಲ್ಲೇ ನಿಂತು ಗಡಿ ವಿವಾದ ಕೆದಕಿದ್ದಾರೆ.
ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ನಡೆಯುತ್ತಿರುವ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿ ಅವರು ಗಡಿವಿವಾದ ಪ್ರಸ್ತಾಪಿಸಿದ್ದಾರೆ.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ಪಾಟೀಲ್, ಗಡಿವಿವಾದ ಇತ್ಯರ್ಥಕ್ಕೆ ಹಿಂದಿನ ಮಹಾರಾಷ್ಟ್ರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ನನ್ನ ತಂದೆ ಎಂಎಲ್‌ಎ ಆದಾಗ ಗಡಿಭಾಗದ ಮರಾಠಿ ಜನರ ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕರ್ನಾಟಕದ ಗಡಿಭಾಗ ಮಹಾರಾಷ್ಟ್ರದಲ್ಲಿದ್ದಿದ್ರೆ ಇಷ್ಟೊತ್ತಿಗೆ ನಾನು ಬೆಳಗಾವಿ ಎಂಎಲ್ಎ ಆಗಿರ್ತಿದ್ದೆ ಎಂದಿದ್ದಾರೆ.
ಗಡಿವಿವಾದ ಬಗೆಹರಿಸಲು ಆಗಿನ ಸರ್ಕಾರ ಮುಂದೆ ಬರಲಿಲ್ಲ. ಹೀಗಾಗಿ ಮಹಾರಾಷ್ಟ್ರದ ರಾಜಕೀಯ ನಾಯಕರು ಗಮನ ಸೆಳೆಯಲು ನಾನೂ ಸಹ ನನ್ನ ತಂದೆಯ ರೀತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಅಷ್ಟೇ ಅಲ್ಲದೇ, ಸಾಹಿತ್ಯ ಸಮ್ಮೇಳನದಲ್ಲಿ ಹೊರಡಿಸಿದ ಠರಾವುಗಳನ್ನು ನಿಮ್ಮ ಪ್ರತಿನಿಧಿಯಾಗಿ ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುವೆ ಎಂದು ಭರವಸೆ ನೀಡಿದ್ದಾರೆ.