ಬೆಳಗಾವಿ: ಕೊರೊನಾ ಜ್ವರದ ಕಾರಣ ಮದುವೆ ಸೇರಿದಂತೆ ಜನ ಸೇರುವ ಇನ್ನಿತರ ಕಾರ್ಯಕ್ರಮಗಳನ್ನು ವಾರಗಳ ಕಾಲ ನಡೆಸಬಾರದು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇದರ ಹೊರತಾಗಿಯೂ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ತಮ್ಮ ಮಗಳ ಮದುವೆಯನ್ನು ಪೂರ್ವ ನಿಗದಿಯಂತೆ ಅದ್ಧೂರಿಯಾಗಿ ಮಾಡುತ್ತಿದ್ದಾರೆ.
ನಗರದ ಉದ್ಯಮಭಾಗ್ನಲ್ಲಿರುವ ಶಗುನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಈ ಮದುವೆಗೆ ಈಗಾಗಲೇ ಸಾವಿರಾರು ಜನ ಆಗಮಿಸಿದ್ದಾರೆ. ಈ ಮುನ್ನ ಕ್ಲಬ್ ರೋಡ್ನಲ್ಲಿರುವ ಸಿಪಿಎಡ್ ಮೈದಾನದಲ್ಲಿ ಮದುವೆಗೆ ಅದ್ಧೂರಿ ಸೆಟ್ ಹಾಕಲಾಗಿತ್ತು. ಆದರೆ, ಕೊರೊನಾ ಭೀತಿಯಿರುವ ಕಾರಣಕ್ಕೆ ಅಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಶಗುಣ್ ಗಾರ್ಡನ್‌ಗೆ ಸ್ಥಳಾಂತರಿಸಲಾಗಿತ್ತು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಈ ಹಿಂದೆ ಮಾತನಾಡಿದ್ದ ಕವಟಗಿಮಠ ಸರಳ ಮದುವೆ ಮಾಡುವುದಾಗಿ ತಿಳಿಸಿದ್ದರು. ಆದರೀಗ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ.
ಸರ್ಕಾರದ ಆದೇಶವೇನು?
ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿರುವುದರಿಂದ ಅದ್ಧೂರಿ ಮದುವೆ, ಸಭೆ ಸಮಾರಂಭಗಳು, ಸಿನಿಮಾ ಥಿಯೇಟರ್, ಮಾಲ್ಗಳನ್ನು ಮಾ.15ರಿಂದ 28ರವರೆಗೆ ಬಂದ್ ಮಾಡುವಂತೆ ಸರ್ಕಾರ ಆದೇಶಿಸಿದೆ.
ಮುಖ್ಯಮಂತ್ರಿ ಸೇರಿ ಗಣ್ಯರಿಂದ ಶುಭಾಶಯ:
ಆದರೆ, ಸರ್ಕಾರದ ಆದೇಶ ಮೀರಿ ಸರ್ಕಾರದ ಮುಖ್ಯ ಸಚೇತಕರೇ ಮಗಳು ಡಾ.ಪೂಜಾ ಮತ್ತು ಡಾ.ಅವಿನಾಶ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳೂ ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ವಧು-ವರನಿಗೆ ಶುಭಕೋರಿದ್ದಾರೆ.