ಬೆಳಗಾವಿ: ಅಂತಾರಾಜ್ಯ ಜಲವಿವಾದ ತಿದ್ದುಪಡಿ ಮಸೂದೆ-2019ಅನ್ನು ಚಳಿಗಾಲ ಅಧಿವೇಶನದ ರಾಜ್ಯಸಭೆಯಲ್ಲಿ ಮಂಡಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಗೋವಾದ ರಾಜಕೀಯ ಒತ್ತಡಕ್ಕೆ ಮಣಿದಿದೆ. ಹೀಗಾಗಿ ಕೇಂದ್ರ ಸರ್ಕಾರ ತಾನು ಕೊಟ್ಟ ಭರವಸೆಯಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿದೆ.
ಅಂತಾರಾಜ್ಯ ಜಲವಿವಾದ ತಿದ್ದುಪಡಿ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಪಾಸಾಗಿದೆ. ರಾಜ್ಯಸಭೆಯಲ್ಲಿ ಈ ಬಿಲ್ ಪಾಸ್ ಆಗಬೇಕಿದೆ. ಹೊಸ ತಿದ್ದು ಪಡಿಯು ಜಾರಿಗೆ ಬಂದರೆ ವಿವಿಧ ರಾಜ್ಯಗಳ ನಡುವಿನ ಜಲವಿವಾದಗಳಿಗಾಗಿ ಒಂದೇ ನ್ಯಾಯಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಅದು ನೀಡುವ ತೀರ್ಪನ್ನು ಅಧಿಸೂಚನೆ ಹೊರಡಿಸುವ ಅವಶ್ಯಕತೆಯೂ ಇರುವುದಿಲ್ಲ. ರಾಜ್ಯಸಭೆಯಲ್ಲಿ ಈ ತಿದ್ದುಪಡಿಯು ಅಂಗೀಕಾರವಾದರೆ ಕಳಸಾ ಬಂಡೂರಿ ಯೋಜನೆಯ ಅನುಷ್ಠಾನದಲ್ಲಿ ಇರುವ ಅಡಚಣೆಗಳು ದೂರವಾಗುತ್ತವೆ. ಅಲ್ಲದೇ ಕರ್ನಾಟಕವು ಮಹದಾಯಿ ಮತ್ತು ಕೃಷ್ಣಾ ಯೋಜನೆಗಳ ಸಂಬಂಧ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ತಿದ್ದುಪಡಿ ಮಸೂದೆಯನ್ನು ತಡೆಹಿಡಿಯಲು ಗೋವಾ, ಮಹಾರಾಷ್ಟ್ರ, ತಮಿಳುನಾಡು ಮತ್ತು ಛತ್ತೀಸ್ಗಢ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ತರುತ್ತಿವೆ ಎನ್ನಲಾಗಿದೆ. ಮಹದಾಯಿ ಯೋಜನೆ ಜಾರಿಗಾಗಿ ಕೇಂದ್ರ ಪರಿಸರ ಖಾತೆಯ ಅನುಮತಿ ಅವಶ್ಯಕತೆಯಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ಅಕ್ಟೋಬರ್ನಲ್ಲಿ ಕರ್ನಾಟಕಕ್ಕೆ ತಿಳಿಸಿದ್ದನ್ನು ಗೋವಾ ಸರ್ಕಾರ ಆಕ್ಷೇಪಿಸಿತ್ತು.
ಅಲ್ಲದೇ ಪರಿಸರ ಖಾತೆಯ ಈ ಗ್ರೀನ್ ಸಿಗ್ನಲ್ ಅನ್ನು ಹಿಂಪಡೆಯುವಂತೆಯೂ ಗೋವಾ ಸರ್ಕಾರ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಆಗ್ರಹಿಸಿದೆ. ಚಳಿಗಾಲ ಅಧಿವೇಶನದ ರಾಜ್ಯಸಭೆಯಲ್ಲಿ ಮಂಡನೆಯಾಗಬೇಕಿದ್ದ ತಿದ್ದುಪಡಿ ಮಸೂದೆಯನ್ನು ಮುಂದಿನ ವರ್ಷದ ಮಾರ್ಚ್ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಸದ್ಯಕ್ಕೆ ಗೋವಾ ಸರ್ಕಾರ ಕರ್ನಾಟಕದ ವಿರುದ್ಧ ಕೇಂದ್ರದಲ್ಲಿ ಮೇಲುಗೈ ಸಾಧಿಸಿದಂತಾಗಿದೆ. ಕೇಂದ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರುಗಳಾದ ಸುರೇಶ ಅಂಗಡಿ, ಪ್ರಹ್ಲಾದ್ ಜೋಶಿ, ಸದಾನಂದಗೌಡ ಮತ್ತು ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರದ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎಂಬುದನ್ನು ಕಾದು ನೋಡಬೇಕು.