ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಳಸಾ ಬಂಡೂರಿ ತಿರುವು ಯೋಜನಾ ಪ್ರದೇಶಕ್ಕೆ ಇಂದು ಮಧ್ಯಾಹ್ನ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರ ಜಂಟಿ ಪರಿಶೀಲನಾ ಸಮಿತಿ ಭೇಟಿ ನೀಡಿತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಲು ಮಾಧ್ಯಮ ಪ್ರತಿನಿಧಿಗಳಿವೆ ನಿರ್ಬಂಧ ಹೇರಲಾಗಿತ್ತು.
ಸಮಿತಿ ಭೇಟಿಯ ವಿಡಿಯೋ ಹಾಗೂ ಫೋಟೊ ತೆಗೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಇಂದಿನ ಭೇಟಿಯ ಬಗ್ಗೆ ವರದಿ ಸಿದ್ಧಪಡಿಸುವ ಸಮಿತಿ ಸುಪ್ರೀಂ ಕೋರ್ಟ್ಗೆ ರವಾನಿಸಲಿದೆ. ಕರ್ನಾಟಕ ಈಗಾಗಲೇ ಮಹಾದಾಯಿ ನೀರನ್ನು ತಿರುಗಿಸಿಕೊಂಡಿದೆ ಎಂದು ಗೋವಾ ಸರ್ಕಾರ ಆರೋಪ ಮಾಡಿತ್ತು. ಹೀಗಾಗಿ ಜಂಟಿ ಸಮಿತಿ ರಚನೆಗೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್, ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿತ್ತು.
ಯೋಜನಾ ಪ್ರದೇಶದಲ್ಲಿ ನಿರ್ಮಿಸಲಾದ ಎರಡು ಗುಹೆಗಳನ್ನು ಅಳತೆ ಮಾಡಿಸಿದ ಸಮಿತಿಯು ಹೊರಗಿನಿಂದಲೇ ಪರಿಶೀಲಿಸಿತು. ಏಪ್ರಿಲ್ 4 ರಂದು ಸರ್ವೋನ್ನತ ನ್ಯಾಯಾಲಯವು ಈ ಸಂಬಂಧ ವಿಚಾರಣೆ ನಡೆಸಲಿದೆ. ಶುಕ್ರವಾರ ಮುಂಜಾನೆ ಯೋಜನಾ ಪ್ರದೇಶಕ್ಕೆ ಆಗಮಿಸಿದ ಸಮಿತಿ ಸದಸ್ಯರು ಸಂಜೆ 6 ಗಂಟೆವರೆಗೆ ಕಣಕುಂಬಿ ಐಬಿಯಲ್ಲೇ ಚರ್ಚೆ ನಡೆಸಿದರು.